ಬೆಂಗಳೂರು: ಇವತ್ತು ಗಾಂಧಿ ಜಯಂತಿ, ಈ ದಿನ ನಕಲಿ ಗಾಂಧಿ ಬಗ್ಗೆ ಯಾಕೆ ಮಾತನಾಡಲಿ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.
ಅತ್ಯಂತ ಭ್ರಷ್ಟ ಸರ್ಕಾರ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಇಡೀ ಪಾರ್ಟಿ ಬೇಲ್ ಮೇಲಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ನಮ್ಮ ಅಧ್ಯಕ್ಷರೂ ಬೇಲ್ನಲ್ಲಿದ್ದಾರೆ. ಕರ್ನಾಟಕ ಕಾಂಗ್ರೆಸ್ಗೆ ATM ಆಗಿತ್ತು. ಈಗ ಅದು ಇಲ್ಲ. 40% ಇಲ್ಲ ಏನು ಇಲ್ಲ. ಏನಾದ್ರು ನಡೆದಿದ್ದರೆ ತನಿಖೆ ಮಾಡಿಸ್ತೇನೆ, ದಾಖಲೆ ಕೊಡಿ ಎಂದು ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ v/s ಜೆಡಿಎಸ್ ಕಾರ್ಯಕರ್ತರ ಜಟಪಟಿ ವಿಚಾರವಾಗಿ ಮಾತನಾಡುತ್ತಾ, ಇದರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಸರ್ಕಾರದ ಕಾರ್ಯಕ್ರಮ, ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸೋದಿಲ್ಲ. ಹಿಂಸೆಗೆ ಅವಕಾಶವಿಲ್ಲ. ನಾವೆಲ್ಲ ಬಹಳ ದೂರ ಬಂದಿದ್ದೇವೆ. ಒಟ್ಟಾರೆ ಅನುದಾನ ಜನರಿಗೆ ಮುಟ್ಟುವುದು ಮುಖ್ಯ. ಇಂಥ ಸಂದರ್ಭ ಬಂದಾಗ ಹಿಂದಿನ ಸರ್ಕಾರಗಳು ಏನೆಲ್ಲ ಮಾಡಿದೆ ಅಂತ ನಮ್ಮ ಮುಂದೆ ಇದೆ ಎಂದರು.
ಗಾಂಧಿ, ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ: ಗಾಂಧಿ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸಚಿವ ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಡಾ.ರಾಜ್ ಕುಮಾರ್ ಅವರು ಒಂದು ದಂತಕಥೆ: ಸಿಎಂ ಬೊಮ್ಮಾಯಿ
ಇನ್ನು ಮಾಜಿ ಪ್ರಧಾನಿಗಳಾದ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 118ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಎಂ.ಟಿ. ಬಿ.ನಾಗರಾಜ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.