ಬೆಂಗಳೂರು: ಆಯವ್ಯಯ ಘೋಷಣೆಯಂತೆ ಪ್ರತಿ ವಿಭಾಗದಲ್ಲಿ ಒಂದು ಪರಿಸರ ಸ್ನೇಹಿ ಸ್ಮಾರ್ಟ್ ಇಂಟಿಗ್ರೇಟೆಡ್ ಟೌನ್ಷಿಪ್ ಯೋಜನೆ ಜಾರಿಗೆ ನಗರ ಯೋಜನೆಯಲ್ಲಿ ಪರಿಣತಿ ಹೊಂದಿದ ವಿಶ್ವವಿದ್ಯಾಲಯಗಳ ಸಹಯೋಗ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂಟಿಗ್ರೇಟೆಡ್ ಟೌನ್ಷಿಪ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಿಂಗಾಪುರ ವಿಶ್ವವಿದ್ಯಾಲಯ ಮತ್ತು ಇತರ ಕೆಲವು ವಿಶ್ವವಿದ್ಯಾಲಯಗಳು ನಗರ ಯೋಜನೆಯಲ್ಲಿ ವಿಶೇಷ ಪರಿಣತಿ ಹೊಂದಿವೆ. ಅವುಗಳ ನೆರವು ಪಡೆಯಬೇಕು. ಈ ಟೌನ್ಷಿಪ್ಗಳು ಪರಿಸರ ಸ್ನೇಹಿ ಹಾಗೂ ಸ್ಮಾರ್ಟ್ ನಗರಗಳಾಗಿದ್ದು, ವಸತಿ, ಅಗತ್ಯ ಮೂಲಸೌಕರ್ಯಗಳು, ಶೈಕ್ಷಣಿಕ ಸೌಲಭ್ಯ, ಆರೋಗ್ಯ ಸೇವೆಗಳು, ವಾಣಿಜ್ಯ ಚಟುವಟಿಕೆಗಳು ಹಾಗೂ ಸಮೀಪದಲ್ಲಿಯೇ ಕೈಗಾರಿಕೆಗಳೂ ಸ್ಥಾಪಿಸುವಂತಿರಬೇಕು. ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರಬೇಕು ಎಂದು ಸಿಎಂ ತಿಳಿಸಿದರು.
ಟೌನ್ಷಿಪ್ ನಿರ್ಮಾಣಕ್ಕೆ ಭೂಮಿಯ ಲಭ್ಯತೆಯ ಆಧಾರದಲ್ಲಿ ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಗೆ ಕಾನ್ಸೆಪ್ಟ್ ಪೇಪರ್ ಸಿದ್ಧಪಡಿಸಿ ಸಲ್ಲಿಸುವಂತೆ ಬೊಮ್ಮಾಯಿ ಸೂಚಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಸೂಚನೆ