ಬೆಂಗಳೂರು: ಕೆಶಿಪ್, ಎಸ್ಹೆಚ್ಡಿಪಿ ಹಾಗೂ ಕೆಆರ್ಡಿಸಿಎಲ್ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆಗಳ ಪೈಕಿ ಜೀವಿತಾವಧಿ ಮುಕ್ತಾಯಗೊಂಡ 1008 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ ಡಿಪಿಆರ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕು. ಬಿಡುಗಡೆಗೊಳಿಸಿದ ಅನುದಾನದ ಗರಿಷ್ಠ ಸದ್ಬಳಕೆಯಾಗಬೇಕು ಎಂದು ಸೂಚಿಸಿದರು.
ರಾಜ್ಯವ್ಯಾಪಿ ವಿವಿಧ ಇಂಜಿನಿಯರಿಂಗ್ ಇಲಾಖೆಗಳ ಏಕರೂಪ ದರಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯಡಿ ಜಾರಿಗೆ ತರಲಾಗುತ್ತಿದ್ದು, ಇದರಂತೆಯೇ ಸರ್ಕಾರಿ ಕಟ್ಟಡಗಳಲ್ಲಿ ಬಳಕೆಯಾಗುವ ವಸ್ತುಗಳಿಗೆ ಕೂಡ ಏಕರೂಪ ದರಪಟ್ಟಿಯನ್ನು ರೂಪಿಸುವಂತೆ ಸಿಎಂ ನಿರ್ದೇಶನ ನೀಡಿದರು.
ರಾಜ್ಯ ಹೆದ್ದಾರಿಗಳು ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಯೋಜನೆ(integration)ಯಾಗಬೇಕು. ಇದಕ್ಕೆ ಪೂರಕವಾಗಿ ರಸ್ತೆ ತಜ್ಞರಿಂದ ಮಾಸ್ಟರ್ ಪ್ಲಾನ್ ಸಿದ್ಧ ಪಡಿಸುವಂತೆ ಸಿಎಂ ಬೊಮ್ಮಾಯಿಯವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀಶೈಲದಲ್ಲಿ 45 ಕೋಟಿ ಯೋಜನೆ: ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಇಲಾಖೆಯ ಒಡೆತನದ ಭೂಮಿಯಲ್ಲಿ ಕರ್ನಾಟಕ ವಸತಿ ಸಂಕೀರ್ಣ ನಿರ್ವಹಿಸಲು 45 ಕೋಟಿ ರೂ.ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನೂ ಓದಿ: ಕೊರೊನಾಗೆ ಜನ ತತ್ತರ.. ರಾಜ್ಯದಲ್ಲಿಂದು ಕೋವಿಡ್ನಿಂದ 81 ಮಂದಿ ಸಾವು!
ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ