ಬೆಂಗಳೂರು: ವಿವಿಧ ಇಲಾಖೆಯಿಂದ ಕೋಟ್ಯಂತರ ರೂ. ಬಾಕಿ ಪಾವತಿಗಾಗಿ ಶೇ 30-40 ಕಮಿಷನ್ ಪಡೆಯುವ ಆರೋಪ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಿಷನ್ ಸಂಬಂಧ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಯಾರ ಹೆಸರನ್ನೂ ಅವರು ನಿರ್ಧಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೂ ಕೂಡ ನಾವು ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.
ನಮ್ಮ ಅವಧಿಯಲ್ಲಿ ಯಾವುದಾದರೂ ಟೆಂಡರ್ ಪ್ರಕ್ರಿಯೆಯಲ್ಲಿ ಏನೇ ದೋಷವಾಗಿದ್ರೂ ಪರಿಷ್ಕರಣೆ ಮಾಡುತ್ತೇವೆ. ನನ್ನ ಅವಧಿಯಲ್ಲಿ ಅಥವಾ ಅದಕ್ಕಿಂತ ಮೊದಲು ಆಗಿದ್ರೂ ಪರಿಷ್ಕರಣೆ ಮಾಡುತ್ತೇವೆ. ನಮ್ಮದು ಪಾರದರ್ಶಕ ಸರ್ಕಾರ. ಈ ಬಗ್ಗೆ ತನಿಖೆ ನಡೆಸುವಂತೆ ಸಿಎಸ್ಗೆ ಆದೇಶಿಸಲಾಗಿದೆ. ಇಲಾಖಾವಾರು ತನಿಖೆಗೂ ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬೆಳೆ ನಾಶ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ಪ್ರತಿದಿನ ಪರಿಹಾರ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ. ಹಣ ಕೊರತೆಯಾದರೆ ಮುಂಚಿತವಾಗಿ ತಿಳಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಈ ಬಗ್ಗೆ ಮೊನ್ನೆ ಸಭೆ ಮಾಡಿದ್ದೇನೆ. ಮಳೆಯಿಂದ ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಸರ್ವೇ ಆಗಿ ಮಾಹಿತಿ ಪರಿಹಾರ ಆ್ಯಪ್‌ನಲ್ಲಿ ಅಪ್ಲೋಡ್ ಆದ ತಕ್ಷಣ ಹಣ ರೈತರಿಗೆ ಹೋಗಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಣ ಕೊರತೆ ಆದರೆ ಹೇಳಿ ಹಣ ಬಿಡುಗಡೆಗೆ ಸೂಚಿಸುತ್ತೇನೆ ಎಂದು ಕಂದಾಯ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಪ್ರತಿ ತಾಲೂಕಿಗೆ ಒಂದರಂತೆ ಪ್ರತಿವರ್ಷ ಶಾಲೆ ಮಂಜೂರು: ಸಚಿವ ಬಿ. ಸಿ. ನಾಗೇಶ್