ಬೆಂಗಳೂರು: ಸಂವಿಧಾನವನ್ನು ಎಲ್ಲರೂ ಉಳಿಸೋಣ, ಬದುಕನ್ನು ಕಟ್ಟೋಣ, ದೇಶವನ್ನು ಬೆಳೆಸೋಣ ಎನ್ನುವ ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ನಾಗಸೇನಾ ಬುದ್ಧ ವಿಹಾರದ ವತಿಯಿಂದ ಇಂದು ನಾಗಸೇನಾ ವಿದ್ಯಾಲಯ ಮೈದಾನದಲ್ಲಿ 72ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 'ರಾಷ್ಟ್ರೀಯ ಬೌದ್ಧ ಧರ್ಮ ಅಧಿವೇಶನ'ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ಬುದ್ಧ ನನ್ನ ಮನಸ್ಸಿಗೆ ಬಹಳಷ್ಟು ಹತ್ತಿರ. ಬುದ್ಧ, ಬಸವ, ಅಂಬೇಡ್ಕರ್, ಮಹಾವೀರ ಇವರು ಕಾಲಾತೀತರು. ಅಮೆರಿಕದ ಯಾವುದೇ ಕಾರ್ಪೊರೇಟ್ ಕಂಪನಿಗೆ ಹೋದರೂ ಬುದ್ಧನ ಪ್ರತಿಮೆ ಇರುತ್ತದೆ. ಅದು ಬುದ್ಧನ ಪ್ರಭಾವ, ಶಕ್ತಿ. ಶಾಂತಿ ಸಾಧನೆಗೆ ಇದು ಬಹಳ ಮುಖ್ಯ. ಸಾಧಕನಿಗೆ ಸಾವು ಅಂತ್ಯವಲ್ಲ, ಇವರೆಲ್ಲರೂ ಸಾಧಕರು. ಇವರೆಲ್ಲ ಕಾಲಾತೀತರಾಗಿದ್ದಾರೆ ಎಂದು ಬಣ್ಣಿಸಿದರು.
ಸಾವಿನ ನಂತರ ಹೇಗೆ ಬದುಕಬೇಕು ಎನ್ನುವುದು ಇವರಿಗೆಲ್ಲ ಗೊತ್ತಿದೆ. ಹಾಗಾಗಿ, ಅವರನ್ನು ಇಂದು ಜಗತ್ತು ಸ್ಮರಿಸುತ್ತಿದೆ. ಅವರದು ಆದರ್ಶ, ತ್ಯಾಗದ ಬದುಕು. ತ್ಯಾಗ ಮೂಲಗುಣ. ಈ ಮೂಲಗುಣ ಇಟ್ಟುಕೊಂಡು ಆಧುನಿಕ ತಂತ್ರಜ್ಞಾನದ ಕಡೆ ನಾವು ಹೋಗಬೇಕಿದೆ. ಆದರೆ, ನಾವು ಆ ದಿಕ್ಕಿನತ್ತ ಹೋಗುವ ಸಂದರ್ಭದಲ್ಲಿ ನಮ್ಮ ಬೇರುಗಳನ್ನು ಗಟ್ಟಿಯಾಗಿ ಇರಿಸಿಕೊಳ್ಳಬೇಕು. ಇದು ನಮಗೆ ಸವಾಲು ಎಂದರು.
ಸಾಧನೆ ಮಾಡಲು ಇಂತಹ ಸಂಸ್ಥೆಗಳು ಬೇಕು. ಇಲ್ಲಿ ತಯಾರಾದ ವಿದ್ಯಾರ್ಥಿಗಳಿಗೆ ಸಾಧನೆಗಳನ್ನು ಮಾಡುವ ಶಕ್ತಿ ಬರಲಿದೆ. ಈ ಸಂಸ್ಥೆಯ ಬೆಳವಣಿಗೆಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಆಶ್ವಾಸನೆ ನೀಡಿದರು.
ಬಿಸಿಲಿನಲ್ಲಿದ್ದ ಮಕ್ಕಳ ಬಗ್ಗೆ ಕಾಳಜಿ ತೋರಿದ ಸಿಎಂ: ಸಮಾರಂಭಕ್ಕೆ ಭಾಗವಹಿಸಿದ್ದ ಮಕ್ಕಳು ಬಿಸಿಲಿನಲ್ಲಿದ್ದನ್ನು ಕಂಡ ಸಿಎಂ, ಮಕ್ಕಳನ್ನ ಬಿಸಿಲಿನಲ್ಲಿ ಕುಳಿಸಿದ್ದೀರಿ, ಅವರನ್ನು ನೆರಳಿಗೆ ಕಳುಹಿಸಿ ಎಂದು ಕಾಳಜಿ ತೋರಿದರು.
ಓದಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಬ್ಯಾಂಕ್ ಲಾಕರ್ ಖಾಲಿ ಖಾಲಿ.. ಎಸಿಬಿಗೇ ಶಾಕ್