ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ದ್ರೌಪದಿ ಮುರ್ಮು ರಾಜ್ಯಕ್ಕೆ ಆಗಮಿಸಿದ್ದು, ಶಾಸಕರು ಮತ್ತು ಸಂಸದರಿಂದ ಮತ ಯಾಚನೆ ಮಾಡುತ್ತಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಿದ್ದ ಮುರ್ಮು ಅವರು ಇಂದು ಖುದ್ದು ಆಗಮಿಸಿ ಮತ ಯಾಚನೆ ಮಾಡುತ್ತಿದ್ದಾರೆ.
ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ನಾಮಪತ್ರ ಸಲ್ಲಿಸಿದ ಬಳಿಕ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಮುರ್ಮು ಅವರನ್ನು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು.
ಮಳೆಯ ನಡುವೆ ಸ್ವಾಗತ: ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರೆದಿದ್ದು, ಛತ್ರಿಗಳನ್ನು ಹಿಡಿದೇ ರಾಷ್ಟ್ರಪತಿ ಅಭ್ಯರ್ಥಿಯನ್ನು ಸ್ವಾಗತಿಸಲಾಯಿತು. ನಂತರ ವಸಂತ ನಗರದಲ್ಲಿರುವ ಖಾಸಗಿ ಹೋಟೆಲ್ಗೆ ತೆರಳಿದ ಮುರ್ಮು ಪಕ್ಷದ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಭಾಗಿಯಾಗಿದ್ದಾರೆ.
ತಡವಾಗಿ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ: ಮುರ್ಮು ಅವರ ಸ್ವಾಗತಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಾರದ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ನೇರವಾಗಿ ಖಾಸಗಿ ಹೋಟೆಲ್ಗೆ ಆಗಮಿಸಿ ಸಭೆಯಲ್ಲಿ ಭಾಗಿಯಾದರು.
ಮುರ್ಮು ಸ್ವಾಗತಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಸ್ವಾಗತಕ್ಕೆ ತಯಾರಿ ಮಾಡಿಕೊಂಡಿದ್ದ ಬಿಜೆಪಿ ಆದಿವಾಸಿ ಕಲಾ ತಂಡಗಳ ಮೂಲಕವೇ ಸ್ವಾಗತ ಕೋರಿತು. ಆದಿವಾಸಿ ಸಮಾಜದ ಮಹಿಳೆಯಾಗಿರುವ ಮುರ್ಮು ಅವರನ್ನು ಆ ಸಮುದಾಯದ ಕಲಾ ತಂಡಗಳಿಂದಲೇ ಸ್ವಾಗತಿಸಲಾಯಿತು. ಹೋಟೆಲ್ನ ಹೊರ ಭಾಗದಲ್ಲೂ ಕೂಡ ಬಿಜೆಪಿ ಫ್ಲಾಗ್ಗಳನ್ನು ಹಾಕಿದ್ದು, ದೊಡ್ಡ ಸಂಖ್ಯೆಯಲ್ಲಿ ಮುರ್ಮು ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಜಮಾಯಿಸಿದ್ದರು.
ಓದಿ: ಶಾಸಕರ ಸರಣಿ ಭೇಟಿ ಬೆನ್ನಲ್ಲೇ ಬಿಎಸ್‍ವೈ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಆಗಮನ