ಬೆಂಗಳೂರು: ನಮ್ಮ ಗಡಿ, ನಮ್ಮ ನೆಲದ ರಕ್ಷಣೆಗೆ ಹೋರಾಟ ಮಾಡಲು, ಕಾನೂನು ಸಮರ ಮಾಡಲು ನಾವು ಎಲ್ಲ ರೀತಿಯಲ್ಲಿಯೂ ಸಿದ್ಧವಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಇದೇ 30ರಂದು ವಿಚಾರಣೆಗೆ ಬರಲಿರುವ ಗಡಿ ವಿಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು.
ಕಾನೂನು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ : ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ವಿ. ಪಾಟೀಲ್ ನೇತೃತ್ವದಲ್ಲಿ ಮೊದಲ ಸಭೆ ನಡೆಸಿದ್ದೇವೆ. ನವೆಂಬರ್ 30 ರಂದು ಗಡಿ ಪ್ರಕರಣದ ವಿಚಾರಣೆ ಬರಲಿದೆ. 2004ರಲ್ಲಿ ಮಹಾರಾಷ್ಟ್ರ ಸರ್ಕಾರ ದಾವೆ ಹೂಡಿದ ನಂತರ ಇದುವರೆಗೂ ಏನೇನಾಗಿದೆ? ಯಾವ ಪ್ರಮುಖ ಅಂಶ ಹಿಂದೆಲ್ಲಾ ನಡೆದಿದೆ? ನಾಳೆ ವಿಚಾರಣೆ ವೇಳೆ ಬರುವ ವಿಚಾರಗಳೇನು? ಎನ್ನುವ ಕುರಿತು ಇಂದು ಚರ್ಚೆ ನಡೆಸಿದ್ದೇವೆ ಎಂದರು.
ಕಾನೂನು ಸಮರಕ್ಕೆ ಸಿದ್ಧರಿದ್ದೇವೆ : 2017 ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸಬೇಕೋ ಬೇಡವೋ ಎನ್ನುವ ಕುರಿತು ತೀರ್ಪು ನೀಡಿದ್ದರು. 2017ರ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಕೋರ್ಟ್ ಮೆಟ್ಟಿಲೇರಿದೆ. ಇವೆಲ್ಲಾ ಇನ್ನು ವಿಚಾರಣಾ ಹಂತದಲ್ಲಿದೆ, ಕಾನೂನು ಏನು ಹೇಳಿದೆ? ಸಂವಿಧಾನ ಏನು ಹೇಳಲಿದೆ?. ನಮ್ಮ ಕಾರ್ಯತಂತ್ರ ಏನಿರಬೇಕು ಎನ್ನುವ ಕುರಿತು ಚರ್ಚಿಸಿದ್ದೇವೆ. ನ್ಯಾ.ಶಿವರಾಜ್ ಪಾಟೀಲ್ ಬಹಳ ಆತ್ಮವಿಶ್ವಾಸದಲ್ಲಿ ಇದ್ದಾರೆ. ಸಂವಿಧಾನ, ವಸ್ತುಸ್ಥಿತಿ ನಮ್ಮ ಪರವಾಗಿದೆ ಎಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಭೆಯಲ್ಲಿ ಎಲ್ಲದಕ್ಕೂ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ನಮ್ಮ ರಾಜ್ಯ ಕಾನೂನು ಸಮರಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. 29ರಂದು ದೆಹಲಿಗೆ ಹೋಗುತ್ತಿದ್ದು, ನಮ್ಮ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರನ್ನು ಭೇಟಿಯಾಗಲಿದ್ದೇನೆ. ಪ್ರಕರಣದ ವಿಚಾರಣೆ ಎದುರಿಸಲು ಐದು ಜನ ವಕೀಲರನ್ನು ನೇಮಿಸಿದ್ದೇವೆ. ಅದರಲ್ಲಿ ರೋಹಟಗಿ ಹಿರಿಯ ವಕೀಲರಾಗಿದ್ದು, ಅವರ ಜೊತೆ ಚರ್ಚಿಸಲಾಗುತ್ತದೆ ಮಾಹಿತಿ ನೀಡಿದರು.
ನಾಳೆ ಪ್ರತಿಪಕ್ಷ ನಾಯಕರೊಂದಿಗೆ ಮಾತುಕತೆ : ಮಹಾರಾಷ್ಟ್ರ ಜೊತೆಗಿನ ಗಡಿ ವಿವಾದ, ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ವಿಷಯದ ಕುರಿತು ನಾಲ್ಕೈದು ದಿನದಲ್ಲಿ ಸರ್ವಪಕ್ಷ ಸಭೆ ಕರೆಯಲಾಗುತ್ತದೆ. ನಾಳೆ ಪ್ರತಿಪಕ್ಷ ನಾಯಕರ ಜೊತೆ ಈ ಸಂಬಂಧ ಮಾತುಕತೆ ನಡೆಸಿ ಅವರ ಸಮಯಾವಕಾಶ ನೋಡಿ ಸಭೆ ನಿಗದಿಪಡಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ವಿ. ಪಾಟೀಲ್, ಹಿರಿಯ ವಕೀಲರಾದ ಉದಯ ಹೊಳ್ಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಎಲೆಚುಕ್ಕಿ ರೋಗದ ಖರ್ಚನ್ನು ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ ಅಭಯ