ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು. ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸು ಹಾಗೂ ವರದಿ ಸಲ್ಲಿಸಲು ಈ ಆಯೋಗ ರಚಿಸಲಿದ್ದು, ನೌಕರರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಆರ್ಥಿಕತೆ ಬಲದ ಆಧಾರದ ಮೇಲೆ ಅಭಿವೃದ್ಧಿ, ಜನರ ಆಶೋತ್ತರಗಳಿಗೆ ಸ್ಪಂದನೆ ಜತೆಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಶಕ್ತವಾಗಲಿ ಎಂದು ಸಿಎಂ ಹೇಳಿದರು. ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು, ಪುಣ್ಯ ಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.
ಸರ್ಕಾರದ ಪ್ರಮುಖವಾದ ಒಂದು ಭಾಗ ಮತ್ತು ಅಂಗ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಡುವ ಕೆಲಸ ಕರ್ತವ್ಯ ಎನಿಸುತ್ತದೆ. ಬದುಕಿನಲ್ಲಿ ಸೇವೆ ಮಾಡಿ ಸಂತೃಪ್ತಿ ಪಡೆಯುವುದು ಕಾಯಕ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಪ್ರಜೆಗಳೇ ನಮ್ಮ ಮಾಲೀಕರು. ಆದಕಾರಣ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸಿ ಎಂದರು.
ಸಹಭಾಗಿತ್ವ ಮುಖ್ಯ : ಪ್ರಧಾನಿ ನರೇಂದ್ರ ಮೋದಿಯವರು 2025ರ ವೇಳೆಗೆ ಭಾರತ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿಯಿಟ್ಟುಕೊಂಡಿದ್ದಾರೆ. ಇದರಲ್ಲಿ ಒಂದು ಟ್ರಿಲಿಯನ್ ಕರ್ನಾಟಕದ ಪಾಲು ಇರಬೇಕು ಎನ್ನುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಸರ್ಕಾರಿ ನೌಕರರ ಸಹಭಾಗಿತ್ವ ಅಷ್ಟೇ ಮುಖ್ಯವಾಗಿದೆ ಎಂದರು. ಸರ್ಕಾರಿ ಕೆಲಸ ಅಂದರೆ ಅದು ದೇವರ ಕೆಲಸ. ಸರ್ಕಾರಿ ನೌಕರರು ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕು. ಸರ್ಕಾರದ ಅಂಗದಲ್ಲಿ ಕಾರ್ಯಾಂಗ ಬಹಳ ಮುಖ್ಯ. ಕಾರ್ಯಾಂಗ ಉತ್ತರ ಕೆಲಸ ಮಾಡಿದರೆ ಬಡವರು ಉದ್ದಾರ ಆಗುತ್ತಾರೆ ಎಂದರು.
ಕಾರ್ಯಾಂಗ ಅನ್ನೋದು ಸರ್ಕಾರದ ಒಂದು ಮಹತ್ವದ ಅಂಗ. ಕೆಲಸ ಹಾಗೂ ಕರ್ತವ್ಯಗೆ ಬಹಳ ವ್ಯತ್ಯಾಸ ಇದೆ. ಕಾರ್ಯಾಂಗದವರು ಸಮಾಜಕ್ಕೆ ಒಳ್ಳೆಯದಾಗುವ ಹಾಗೇ ಕರ್ತವ್ಯ ನಿರ್ವಹಿಸಬೇಕು. ಬಡವರಿಗೆ ಸಹಾಯಮಾಡಿದ್ರೆ ಸರ್ಕಾರಿ ನೌಕರರನ್ನು ಆ ಬಡವರು ಜೀವನಪೂರ್ತಿ ನೆನೆಸಿಕೊಳ್ಳುತ್ತಾರೆ. ಸರ್ಕಾರಿ ಕೆಲಸದಲ್ಲಿ ಜವಾಬ್ದಾರಿಯುತ ಅಧಿಕಾರ ಇರುತ್ತದೆ. ರಾಜ್ಯದ ಅಭಿವೃದ್ಧಿಗೆ ಕಾರ್ಯಾಂಗ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಮ್ಮ ಮಾಲೀಕರು ಯಾರು?: ನನ್ನನ್ನೂ ಸೇರಿದಂತೆ ನಮಗೆ ನಮ್ಮ ಮಾಲೀಕರು ಬೇರೆ ಯಾರೂ ಅಲ್ಲ. ಜನಸಾಮಾನ್ಯರು ಇವರೇ ನಮ್ಮ ಮಾಲೀಕರು. ಬಡವರು ಕಟ್ಟುವ ತೆರಿಗೆಯಿಂದಲೇ ನಮಗೆ ಸಂಬಳ ಸಿಗುತ್ತದೆ. ಹಾಗಾಗಿ, ನಾವು ಈ ಜನಸಾಮಾನ್ಯರಿಗಾಗಿ ದುಡಿಯಬೇಕು. ದುಡ್ಡಿನಿಂದ ನಾವು ಆಸ್ತಿ ಮಾಡಬಹುದು. ಆದರೆ, ಆತ್ಮಸಾಕ್ಷಿಗೆ ನಾವು ಜನ ಸಾಮಾನ್ಯರಿಗಾಗಿ ಕೆಲಸಮಾಡಬೇಕು ಎಂದರು.
ಕೋವಿಡ್ ನಿಂದ ಇಡೀ ದೇಶವೇ ಕಷ್ಟದಲ್ಲಿ ಇತ್ತು. ಪ್ರಧಾನಿ ಮೋದಿ ನಾಯಕತ್ವದಲ್ಲಿ ನಾವು ಕೋವಿಡ್ ಎದುರಿಸಿದ್ದೇವೆ. ಕೋವಿಡ್ ಸಂದರ್ಭಗಳಲ್ಲಿ ಬೇರೆ ದೇಶಗಳ ಆರ್ಥಿಕತೆ ಕುಸಿದಿತ್ತು. ಇನ್ನು ನಮ್ಮ ಆರ್ಥಿಕತೆ ಸುಧಾರಣೆ ಆಗಬೇಕು. ಕೋವಿಡ್ ಸಮಯದಲ್ಲಿ 5 ಸಾವಿರ ಕೋಟಿ ಟ್ಯಾಕ್ಸ್ ಹಿಂದುಳಿದಿತ್ತು. ನಾನು 5 ಸಾವಿರ ಕೊಟಿ ಟ್ಯಾಕ್ಸ್ ಸಂಗ್ರಹಣೆ ಮಾಡಿ ಎಂದು ಹೇಳಿದ್ದೆ. ಆದರೆ, 5 ಸಾವಿರ ಕೋಟಿ ಬದಲಾಗಿ 15 ಸಾವಿರ ಕೋಟಿ ತೆರಿಗೆ ಸಂಗ್ರಹಣವಾಗಿದೆ ಎಂದು ಹೇಳಿದರು.
ತಮ್ಮದೇ ಆದ ಕೊಡುಗೆ ನೀಡಬೇಕು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಸೇವೆಗೆ ಬರಲು ದೇವರ ಆಶೀರ್ವಾದ ಇರಬೇಕು. ಆದಕಾರಣ, ಸರ್ಕಾರಿ ನೌಕರರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಂಪುಟ ಶಾಖೆಯ ಉಪ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅವರು ಪ್ರಶಸ್ತಿ ಪುರಸ್ಕೃತರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಬಿ. ಎಸ್ ಲಕ್ಷ್ಮಣ್ ಅವರನ್ನು ಮುಖ್ಯಮಂತ್ರಿ ಗೌರವಿಸಿದರು.
ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ: ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ ಸುಸಂದರ್ಭದಲ್ಲಿ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿ, 30 ನೌಕರರಿಗೆ ತಲಾ ಐವತ್ತು ಸಾವಿರ ರೂಪಾಯಿ ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಂದಾಯ ಸಚಿವ ಆರ್ ಅಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಓದಿ: ಬೆಂಗಳೂರಿನ ಈ ದುಸ್ಥಿತಿಗೆ ಕಾಂಗ್ರೆಸ್ ದುರಾಡಳಿತವೇ ಕಾರಣ: ಸಿಎಂ ಬೊಮ್ಮಾಯಿ