ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು. ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಬಿಎಂಟಿಸಿ ವೋಲ್ವೊ ಬಸ್ನಲ್ಲಿ ಸಿಟಿ ರೌಂಡ್ಸ್ ಆರಂಭಿಸಿದ ಸಿಎಂ, ನಂತರ ಬಸ್ ಹೋಗದ ಕಡೆ ಕಾರಿನಲ್ಲಿ ತೆರಳಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆ.ಸಿ.ನಗರ ಬಡಾವಣೆ ಸೇರಿದಂತೆ ಕಮಲಾನಗರ, ಲಗ್ಗೆರೆ, ನಾಗವಾರ, ಹೆಚ್.ಬಿ.ಆರ್.ಲೇಔಟ್, ಹೆಬ್ಬಾಳ ಪ್ರದೇಶಕ್ಕೆ ಭೇಟಿ ನೀಡಿ ನೀರು ನುಗ್ಗಿದ ಸ್ಥಳಗಳಲ್ಲಿ ಉಂಟಾದ ಹಾನಿ ಬಗ್ಗೆ ಮಾಹಿತಿ ಪಡೆದರು. ನೀರು ನುಗ್ಗಿದ ಮನೆಗಳಿಗೆ ತೆರಳಿ ತೊಂದರೆಗೊಳಗಾದವರ ಕಷ್ಟಕ್ಕೆ ಕಿವಿಯಾದರು.
ಜೆ.ಸಿ.ನಗರದ ನಂತರ ಕಮಲಾನಗರಕ್ಕೆ ಬಸ್ ಬಿಟ್ಟು ಕಾರಿನಲ್ಲಿ ಹೊರಡಲು ಸಿಎಂ ಮುಂದಾದರು. ಈ ಸಂದರ್ಭದಲ್ಲಿ ಸ್ಥಳೀಯರು ಓಡೋಡಿ ಬಂದು ತಮ್ಮ ಆಳಲು ತೋಡಿಕೊಂಡರು. ಆಗ ಕಾರಿನಿಂದ ಇಳಿದು ಸ್ಥಳೀಯರ ಸಮಸ್ಯೆ ಕೇಳಿ ಪರಿಹರಿಸುವ ಭರವಸೆ ನೀಡಿದರು.
ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜೊತೆಗೆ ಸಿಎಂ ದೊಡ್ಡ ಕಾಲುವೆಗಳ ಹೂಳು, ಮೆಟ್ರೋ ಕಾಮಗಾರಿಗಳ ವೀಕ್ಷಣೆ ಮಾಡಿದರು. ಸಚಿವರಾದ ಕೆ.ಗೋಪಾಲಯ್ಯ, ವಿ.ಸೋಮಣ್ಣ, ಆರ್.ಅಶೋಕ್ ಸಿಎಂ ಜೊತೆಗಿದ್ದರು. ನೀರು ನುಗ್ಗಿದ ಮನೆಗಳಿಗೆ ತಲಾ 25 ಸಾವಿರ ರೂ. ಪರಿಹಾರ ಮತ್ತು ಕಾಲುವೆ ಸಮಸ್ಯೆ ಸರಿಪಡಿಸುವ ಭರವಸೆಯನ್ನು ಈಗಾಗಲೇ ಸಿಎಂ ಕೊಟ್ಟಿದ್ದಾರೆ.
ಇದನ್ನೂ ಓದಿ: ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ