ಬೆಂಗಳೂರು : ಸಿದ್ದರಾಮಯ್ಯ, ಡಿಕೆಶಿ ಒಳ ಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಯಾವಾಗಲೂ ಕೂಡ ಜನರ ಹಿತಕ್ಕಾಗಿ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮಹಾತ್ಮಾ ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ-ಅಶೋಕ್ ಪಟ್ಟಣ್ ನಡುವಿನ ಪಿಸು ಮಾತಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ಒಂದೇ ಪ್ರಸಂಗ ಅಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಆಗಿದೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸುವುದು ಬಿಟ್ರೆ, ಬೇರೆ ಅಭಿವೃದ್ಧಿಗೆ ಬಳಕೆ ಮಾಡಿಲ್ಲ. ಯಾರೇ ನಾಯಕರು ಬದಲಾವಣೆ ಆದರೂ ಸರಿಯೇ ಸ್ವಾರ್ಥಕ್ಕಾಗಿ ಅವರ ರಾಜಕಾರಣ. ಹೀಗಾಗಿ, ಅವರ ಗುಣಗಳು ಎಂದಿಗೂ ಬದಲಾವಣೆ ಆಗಲ್ಲ ಎಂದು ಟಾಂಗ್ ನೀಡಿದರು.
ಅತಿರೇಕದ ವರ್ತನೆ ಸಹಿಸಲ್ಲ: ಬೇಕಾಬಿಟ್ಟಿ ಟ್ರಾಫಿಕ್ ಪೊಲೀಸರಿಂದ ಟೋಯಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಟೋಯಿಂಗ್ನಲ್ಲಿರುವ ವ್ಯವಸ್ಥೆ ಪುನರ್ ಪರಿಶೀಲನೆ ಮಾಡುತ್ತಿದ್ದೇವೆ. ರಕ್ಷಣೆ ಮಾಡಬೇಕಾದವರೇ, ಅತಿರೇಕದ ವರ್ತನೆ ತೋರುವುದನ್ನು ನಾವು ಸಹಿಸುವುದಿಲ್ಲ ಎಂದು ಸಿಎಂ ಎಚ್ಚರಿಕೆ ನೀಡಿದರು.
ಹಲವಾರು ಘಟನೆ ಬಗ್ಗೆ ನಾನು ಗಮನಿಸಿದ್ದೇನೆ. ಸಾರ್ವಜನಿಕರೊಂದಿಗೆ ಕಾನೂನು ರೀತಿ ನಡೆದುಕೊಳ್ಳಬೇಕು. ಇಡೀ ವ್ಯವಸ್ಥೆ ಬಗ್ಗೆ ನಾಳೆ, ಡಿಜಿ, ಪೊಲೀಸ್ ಕಮಿಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಹಲವು ಬದಲಾವಣೆ ಮಾಡುವುದರೊಂದಿಗೆ ಜನ ಸ್ನೇಹಿ ತೀರ್ಮಾನಗಳನ್ನು ಮಾಡುತ್ತೇವೆ ಎಂದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ : 6 ತಿಂಗಳ ಸರ್ಕಾರದ ಸಾಧನೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಂದ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ?. ಜನ ಹಿತಕ್ಕಾಗಿ ಏನು ಆಗಿದೆ ಅಂತಾ ನೋಡಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಕಿಡಿ ಕಾರಿದರು.
ಯೋಜನೆಗಳು ಕೇವಲ ಘೋಷಣೆ ಅಷ್ಟೇ : ಪ್ರಣಾಳಿಕೆಯಲ್ಲಿನ ಶೇ.90ರಷ್ಟು ಭರವಸೆ ಈಡೇರಿಸಿದ್ದೇವೆ ಎಂದು ಅಂದು ಹೇಳುತ್ತಿದ್ದರು. ಎಲ್ಲಿ ಮಾಡಿದ್ದಾರೆ?. ಅದಕ್ಕಾಗಿ ಅವರನ್ನು ಜನರು ತಿರಸ್ಕಾರ ಮಾಡಿರುವುದು. ಅವರ ಪ್ರಣಾಳಿಕೆಯ ಯೋಜನೆಗಳು ಕೇವಲ ಘೋಷಣೆ ಅಷ್ಟೇ.. ಅನುಷ್ಠಾನ ಎಲ್ಲಿ ಆಗಿದ್ದಾವೆ?. ಯಾವ ಕಾರ್ಯಕ್ರಮ ಯಾವ ರೀತಿ ಅನುಷ್ಠಾನ ಮಾಡಿ, ಯಾರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅರಿವು ನಮಗೆ ಇದೆ. ಈ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.
ವರಿಷ್ಠರು ಯಾವಾಗ ಹೇಳ್ತಾರೆ ಆವಾಗ ದೆಹಲಿಗೆ : ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಂಪುಟ ವಿಸ್ತರಣೆ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗಲ್ಲ. ವರಿಷ್ಠರು ಯಾವಾಗ ಹೇಳ್ತಾರೋ ಆವಾಗ ದೆಹಲಿಗೆ ಹೋಗುತ್ತೇನೆ. ವಿಸ್ತರಣೆ ಸಲುವಾಗಿ ಯಾವಾಗ ಕರೆಯುತ್ತಾರೋ ಆವಾಗ ಹೋಗಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವರ್ಷ ಪ್ರಾರಂಭದಲ್ಲಿ ಎಲ್ಲಾ ಸಂಸದರ ಭೇಟಿ ವಾಡಿಕೆ. ಹೀಗಾಗಿ, ಆದಷ್ಟು ಬೇಗ ಎಲ್ಲಾ ಎಂಪಿಗಳ ಜತೆ ದೆಹಲಿಯಲ್ಲಿ ಸಭೆ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು. ಆದರೆ, ಯಾವಾಗ ದೆಹಲಿ ಪ್ರವಾಸ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಇನ್ನು ನಿಗಮ ಮಂಡಳಿ ನೇಮಕದ ಪಟ್ಟಿ ಬಿಡುಗಡೆ ವಿಳಂಬ ಬಗ್ಗೆ ಮಾತನಾಡಿದ ಅವರು, ಅದು ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಇಬ್ಬರನ್ನೂ ಕರೆದು ಮಾತನಾಡುತ್ತೇನೆ : ಮೈಸೂರು ಸಂಸದ-ಶಾಸಕರ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಕುರಿತು ಚರ್ಚೆ ಆಗಿದೆ ಅಷ್ಟೇ.. ಆದರೆ, ಇಬ್ಬರನ್ನೂ ಕರೆದು ನಾನು ಮಾತನಾಡುತ್ತೇನೆ. ಕೆಲಸಗಳ ಬಗ್ಗೆ ಅಭಿಪ್ರಾಯ ಇದೆಯೇ ಹೊರತು, ಬೇರೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಭಿವೃದ್ಧಿ ಬಗ್ಗೆ ಪೈಪೋಟಿ ಇದ್ದಾಗ ಅಷ್ಟೇ ಈ ರೀತಿಯ ಚರ್ಚೆ ಆಗುತ್ತದೆ ಎಂದರು.
ಸಿನಿಮಾಗೆ ಕೋವಿಡ್ 50:50 ರೂಲ್ಸ್ ಮುಂದುವರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿನ್ನೆ(ಶನಿವಾರ) ಚಿತ್ರರಂಗದವರು ಭೇಟಿಯಾಗಿದ್ದರು. ಅವರ ಜತೆ ಮಾತಾಡಿದ್ದೇನೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ನಿರ್ಧಾರ ಮಾಡಿದ್ದೇವೆ. ಮತ್ತೆ ತಾಂತ್ರಿಕ ಸಲಹಾ ಸಮಿತಿ ಮುಂದೆ ಚಿತ್ರರಂಗದ ಮನವಿ ಮುಂದಿಡುತ್ತೇವೆ. ಆ ಬಳಿಕ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ-ಪಟ್ಟಣ್ ನಡುವಿನ ಪಿಸು ಮಾತಿನಿಂದ ಕಾಂಗ್ರೆಸ್ ಒಳ ಜಗಳ ಬೀದಿಗೆ : ಸಚಿವ ಆರ್.ಅಶೋಕ್