ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಎಲ್ಲ ಶಾಸಕರಿಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್‌ಗೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ, "ಡಿಕೆಶಿ ಅವರಿಗೆ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಕಳೆದ ಎರಡ್ಮೂರು ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ. ಇನ್ನೂ ಉಳಿದಿರುವ 100 ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಮಗಾಗಿ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ" ಎಂದು ದೂರಿದರು.
ಮುಂಬರುವ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳಿಲ್ಲದ ಕಾರಣ ಶಿವಕುಮಾರ್ ಚುನಾವಣೆಗೆ ಮುನ್ನ ಹತಾಶರಾಗಿದ್ದಾರೆ. ವಲಸೆ ಬಂದ ಸಚಿವರಿಗೆ ಮಾತ್ರವಲ್ಲದೇ ಎಲ್ಲ ಶಾಸಕರನ್ನೂ ಕರೆಯುತ್ತಿದ್ದಾರೆ. ಆದರೆ ಅವರು ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ. ಅವರು ನಾವು ಬಿಜೆಪಿ ಬಿಟ್ಟು ಹೋಗಲ್ಲ ಎಂದು ನನಗೆ ಹೇಳಿದ್ದಾರೆ ಎಂದರು.
ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾಗಿ ನಾನು ಎಲ್ಲಾ ಪ್ರವಾಸ ರದ್ದು ಮಾಡಿದ್ದೇನೆ. ಇನ್ನೇನಿದ್ದರೂ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅಧಿಕೃತ ಕೊಪ್ಪಳ ಪ್ರವಾಸ ರದ್ದು ಮಾಡಿದ್ದಾರೆ.
ಏ.9 ರಂದು ಮೈಸೂರಿಗೆ ಪ್ರಧಾನಿ: ಹುಲಿಗಳ ಸಂರಕ್ಷಣಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏ.9 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಅದು ಮೊದಲೇ ನಿಗದಿ ಆಗಿದ್ದ ಕಾರ್ಯಕ್ರಮ ಎಂದು ಸಿಎಂ ತಿಳಿಸಿದರು.
ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಒಳಮೀಸಲಾತಿ ಹಂಚಿಕೆ ನ್ಯಾಯ ಸಮ್ಮತವಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ನಡೆಯುತ್ತಿರುವ ಪ್ರತಿಭಟನೆಗಳು ಕಾಂಗ್ರೆಸ್‌ಪ್ರೇರಿತ. ಒಳ ಮೀಸಲಾತಿ ಜಾರಿಯಾಗಲಿದೆ. ಅದೆಲ್ಲ ಆಗುವಂತಹ ಪ್ರಕ್ರಿಯೆಗಳು. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ" ಎಂದರು.
ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಡಿಕೆ ಶಿವಕುಮಾರ್ ಕಾಲ್ ಮಾಡಿ ಕಾಂಗ್ರೆಸ್‌ಗೆ ಆಹ್ವಾನ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ
ಬಿಎಸ್ವೈ ಮನೆ ಮೇಲೆ ದಾಳಿ ಹಿಂದೆ ಬಿಜೆಪಿ ಕುತಂತ್ರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ಬಿಜೆಪಿಯ ಆಂತರಿಕ ಕುತಂತ್ರದ ಭಾಗವಾಗಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ(ಮಾ.28) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ವಿಚಾರದಲ್ಲಿ ಗೊಂದಲ ಮೂಡಿಸಿರುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಜನ ತಮಗೆ ಅನ್ಯಾಯ ಆದಾಗ ಅಧಿಕಾರದಲ್ಲಿರುವವರ ಮೇಲೆ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಆದರೆ, ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು, ಸಚಿವರ ಮನೆ ಮೇಲೆ ದಾಳಿ ಆಗದೆ ಯಾವುದೇ ಅಧಿಕಾರ ಇಲ್ಲದ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಆಗಿದೆ ಎಂದರೆ ಇದು ಬಿಜೆಪಿಯ ಕುತಂತ್ರಕ್ಕೆ ಸಾಕ್ಷಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಎಸ್ವೈ ಮನೆ ಮೇಲೆ ದಾಳಿ ಹಿಂದೆ ಬಿಜೆಪಿ ಕುತಂತ್ರ: ಡಿ.ಕೆ. ಶಿವಕುಮಾರ್