ಯಲಹಂಕ(ಬೆಂಗಳೂರು) : ಬೆಂಗಳೂರು ಸುತ್ತಮುತ್ತ ಹೆಚ್ಚಾಗಿ ಬೆಳೆಯುವ ಮಾವಿನ ಹಣ್ಣು ದೆಹಲಿ ಮಾರುಕಟ್ಟೆಗೆ ಹೋಗಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಾವಿನ ಹಣ್ಣನ್ನು ಚಿಂತಾಮಣಿಯಿಂದ ದೆಹಲಿಯ ಆದರ್ಶ್ ನಗರಕ್ಕೆ ಕಿಸಾನ್ ರೈಲಿನ ಮೂಲಕ ಸಾಗಿಸಲಾಗುವುದು. ಎರಡು ದಿನಕ್ಕೊಮ್ಮೆ 250 ಟನ್ ಮಾವಿನ ಹಣ್ಣುಗಳನ್ನು ಹೊತ್ತ ಕಿಸಾನ್ ರೈಲು ದೆಹಲಿಯ ಆದರ್ಶ್ ನಗರಕ್ಕೆ ತಲುಪಲಿದೆ. ಇದರಿಂದ ರೈತರಿಗೆ ಪ್ರತಿ ಕೆಜಿ ಮಾವಿನ ಹಣ್ಣಿಗೆ 10 ರೂಪಾಯಿ ಅಧಿಕ ಬೆಲೆ ಸಿಗಲಿದೆ.
ಇಂದು ಯಲಹಂಕ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವಿನ ಹಣ್ಣು ಸಾಗಿಸುವ 'ಕಿಸಾನ್ ರೈಲಿ'ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ಪ್ರಮುಖ ಪಾತ್ರವಹಿಸಿದೆ.
ಕೃಷಿ ಉತ್ಪನ್ನಗಳಿಗೆ ದೂರದ ಮಾರುಕಟ್ಟೆಗಳ ಸಂಪರ್ಕ ಸಿಗುವಂತೆ ಮಾಡಿ ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆಯೆಂದು ಹೇಳಿದ ಸಿಎಂ, ಕಿಸಾನ್ ರೈಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕಿಸಾನ್ ರೈಲು ಆಗಸ್ಟ್ 2020ರಿಂದ ಪ್ರಾರಂಭಗೊಂಡಿದೆ. ರೈತರಿಗೆ, ಕೃಷಿ ಉತ್ಪನ್ನದ ವರ್ತಕರಿಗೆ, ರಫ್ತುದಾರರಿಗೆ ಪ್ರಯೋಜನಕಾರಿಯಾಗಿದೆ. ಕಿಸಾನ್ ರೈಲಿನಲ್ಲಿ ಕೃಷಿ ಉತ್ಪನ್ನಗಳ ರೈಲ್ವೆ ಸಾಗಾಣಿಕೆ ದರದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುತ್ತದೆ. ಇದರಿಂದ ರೈತರಿಗೆ ರಸ್ತೆ ಮೂಲಕ ಸಾಗಾಣಿಕೆ ಮಾಡಿದ್ದಕಿಂತಲೂ ಅತ್ಯಂತ ಕಡಿಮೆ ದರದಲ್ಲಿ ಸಾಗಾಣಿಕೆ ಮಾಡಲು ಅನುಕೂಲವಾಗಿದೆ ಎಂದರು.
ಏನಿದು ಕಿಸಾನ್ ರೈಲು?
ರೈತರ ಆದಾಯ ದ್ವಿಗುಣ ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಕಿಸಾನ್ ರೈಲು. ಕೃಷಿ ಉತ್ಪನ್ನ ಮತ್ತು ಬೇಗನೆ ಹಾಳಾಗುವ ವಸ್ತುಗಳನ್ನು ಉತ್ಪಾದನಾ ಸ್ಥಳದಿಂದ ದೇಶದ ವಿವಿಧ ಭಾಗಗಳಿಗೆ ಸಾಗಿಸಲು 2020-21ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಹಾಲು, ಮಾಂಸ, ಮೀನು, ಹಣ್ಣು ಮತ್ತು ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳನ್ನು ದೇಶದ ವಿವಿಧೆಡೆ ಸಾಗಿಸಲು ಭಾರತೀಯ ರೈಲ್ವೆ ಅನುಕೂಲವಾಗಿದೆ. ರೈತರು ಸಬ್ಸಿಡಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ದೇಶದ ವಿವಿಧ ಭಾಗದ ಮಾರುಕಟ್ಟೆಗೆ ಕಿಸಾನ್ ರೈಲು ಮೂಲಕ ಸಾಗಿಸಬಹುದಾಗಿದೆ.
ಹಣ್ಣುಗಳು ಮತ್ತು ತರಕಾರಿಗಳ ಸಾಗಣಿಕೆಗೆ ಶೇ.50ರಷ್ಟು ಸಹಾಯಧನ ನೀಡಲಾಗುವುದು. ರಸ್ತೆ ಸಾರಿಗೆಗಿಂತ ರೈಲು ಸಾರಿಗೆ ಅಗ್ಗ ಮತ್ತು ವೇಗವಾಗಿ ಮಾರುಕಟ್ಟೆ ತಲುಪುತ್ತವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಸಣ್ಣ ರೈತರು ದೊಡ್ಡ ದೊಡ್ಡ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಬಹುದು. ಅಂತಿಮವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಉತ್ಪನ್ನ ಸಿಕ್ಕರೆ, ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.
2,300 ಕಿ.ಮೀ ದೂರದಲ್ಲಿರುವ ದೆಹಲಿಗೆ ರಾಜ್ಯದ ಮಾವಿನ ಹಣ್ಣು :
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಅದರೆ, ಸೂಕ್ತ ಮಾರುಕಟ್ಟೆ ಸಿಗದೆ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಎರಡು ಜಿಲ್ಲೆಗಳ ಮಾವಿನ ಮಾರುಕಟ್ಟೆ ಸಮೀಕ್ಷೆಯನ್ನು ನೈರುತ್ಯ ರೈಲ್ವೆ ನಡೆಸಿದೆ. ಎರಡು ಜಿಲ್ಲೆಗಳ ಮಾವಿನ ಬೆಳೆಗಾರರ ಅನುಕೂಲಕ್ಕೆ ಕಿಸಾನ್ ರೈಲು ಸಂಚಾರ ನಡೆಸಿದೆ.
ಚಿಂತಾಮಣಿಯಿಂದ 2,300 ಕಿ.ಮೀ ದೂರದಲ್ಲಿರುವ ದೆಹಲಿಯ ಆದರ್ಶ್ ನಗರಕ್ಕೆ ಇಲ್ಲಿನ ಮಾವು, ಕಿಸಾನ್ ರೈಲು ಮೂಲಕ ಸಾಗಣೆಯಾಗಲಿದೆ. ಇದಕ್ಕಾಗಿ 5 ಕಿಸಾನ್ ರೈಲುಗಳನ್ನು ಬಿಡಲಾಗಿದೆ. ಜೂನ್ 20ರಿಂದ 1,250 ಮೆಟ್ರಿಕ್ ಟನ್ ಮಾವು ದೆಹಲಿ ಮಾರುಕಟ್ಟೆಗೆ ತಲುಪಿದೆ.
ಇದನ್ನೂ ಓದಿ: SSLC ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ.. ವಿದ್ಯಾರ್ಥಿಗಳು ಏನಂತಾರೆ?
ಎರಡು ಅಥವಾ ಮೂರು ದಿನಕ್ಕೊಮ್ಮೆ ಚಿಂತಾಮಣಿಯಿಂದ ದೆಹಲಿಗೆ ಮಾವಿನ ಹಣ್ಣು ಹೊತ್ತು ಕಿಸಾನ್ ರೈಲು ಹೊರಡಲಿದೆ. ಪ್ರತಿ ಕಿಸಾನ್ ರೈಲಿನಲ್ಲಿ 250 ಟನ್ ಮಾವು ಸಾಗಿಸಲಾಗುತ್ತದೆ. ಕಿಸಾನ್ ರೈಲು ದೆಹಲಿಯನ್ನು 38 ರಿಂದ 40 ಗಂಟೆಗೆ ತಲುಪಿದರೆ, ರಸ್ತೆ ಮೂಲಕ ಸಾಗಿಸಲು 70 ಗಂಟೆಗಳು ಬೇಕು. ಸಮಯ ಉಳಿತಾಯದಿಂದಾಗಿ ಮಾವಿನ ಹಣ್ಣು ತಾಜಾತನದಿಂದ ಇರುತ್ತದೆ.
ಪ್ರತಿ ಕೋಚ್ನಲ್ಲಿ 10 ಟನ್ ಲೋಡ್ ಆಗುತ್ತದೆ. ಆದರೆ, ರಸ್ತೆ ಸಾಗಾಣಿಕೆಯಲ್ಲಿ 21 ಟನ್ ಲೋಡ್ ಆಗುತ್ತದೆ. ಇದರಿಂದ ಹಣ್ಣಿಗೆ ಹಾನಿಯಾಗುವುದು ಹೆಚ್ಚು. ರೈಲ್ವೆ ಮೂಲಕ ಸಾರಿಗೆ ಅಗ್ಗವಾಗಿದೆ. ಪ್ರತಿ ಕೆಜಿ ಮಾವಿಗೆ 2.80 ರೂಪಾಯಿ ಖರ್ಚಾದ್ರೆ, ರಸ್ತೆ ಸಾರಿಗೆಯಲ್ಲಿ ಪ್ರತಿ ಕೆಜಿ ಮಾವಿಗೆ 6 ರಿಂದ 7 ರೂಪಾಯಿ ವೆಚ್ಚವಾಗಲಿದೆ. ಕಿಸಾನ್ ರೈಲು ಬೆಂಗಳೂರು ಸುತ್ತಮುತ್ತಲಿನ ರೈತರಿಗೆ ವರದಾನವಾಗಿದೆ. ಮುಂದೆ ಟೊಮ್ಯಾಟೊ, ಎಳನೀರು, ತೆಂಗಿನಕಾಯಿ, ಕ್ಯಾಪ್ಸಿಕಂ, ಹಾಲು ಸಾಗಿಸುವ ಯೋಜನೆ ಇದೆ.