ಬೆಂಗಳೂರು: ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 450 ಕೋಟಿ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲಾಗುತ್ತದೆ ಎಂದು ವಿಧಾನ ಪರಿಷತ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನ ಮಧ್ಯಾಹ್ನದ ಕಲಾಪದ ವೇಳೆ ಮುಖ್ಯಮಂತ್ರಿಗಳ ಉತ್ತರದ ನಂತರ ನಡೆದ ಸ್ಪಷ್ಟೀಕರಣ ಕಲಾಪದಲ್ಲಿ ಜೆಡಿಎಸ್ನ ಬೋಜೇಗೌಡ ಮಾತನಾಡಿ, ಶಾಸಕರ ನಿಧಿ ಬಿಡುಗಡೆಯಾಗಿಲ್ಲ. ಈ ತಿಂಗಳ ಒಳಗೆ ಹಣ ಬಿಡುಗಡೆಯಾಗದೇ ಹೋದಲ್ಲಿ ಅನುದಾನ ಲ್ಯಾಪ್ಸ್ ಆಗಲಿದೆ. ಹಾಗಾಗಿ ಕೂಡಲೇ ಶಾಸಕರ ಅನುದಾನದ 450 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಗೆ 700 ಕೋಟಿ ಹಣ ಪಿಡಿ ಖಾತೆಯಲ್ಲಿದೆ. ಆದರೆ ಅದರ ಬಳಕೆ ಹೇಗೆ ಎಂದು ಮುಂದೆ ನೋಡೋಣ. ಈಗ ಸದಸ್ಯರ ಬೇಡಿಕೆಯಂತೆ ತಕ್ಷಣಕ್ಕೆ ಬಾಕಿರುವ 450 ಕೋಟಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಹಣ ನೀಡಲು ಒತ್ತಾಯ ಮಾಡಲಾಗುತ್ತದೆ. ಅಮೃತ್ ಮಹಲ್ ಬಳಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಅಮೃತ ಮಹಲ್ ಕಾವಕ್ ಭೂಮಿ ಕಬಳಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಇರುವ ಭೂಮಿ ಉಳಿಸಿಕೊಳ್ಳಲು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಗಮನ ಹರಿಸಲಾಗುತ್ತದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆಗಳ ವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಎರಡು ಮೂರು ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಯಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿ, ಪ್ರತಿಪಕ್ಷ ಸದಸ್ಯರ ಬೇಡಿಕೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ಧ್ವನಿ ಮತದ ಮೂಲಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ವಿಧಾನ ಪರಿಷತ್ ಅಂಗೀಕರಿಸಿತು.