ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮೂರನೇ ಪ್ಯಾಕೇಜ್ ಘೋಷಿಸಿದ್ದಾರೆ. ಈ ಪ್ಯಾಕೇಜ್ನಲ್ಲಿ ರೈತರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಕೋವಿಡ್-19 ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ನೆರವನ್ನು ಸಿಎಂ ಘೋಷಿಸಿದ್ದಾರೆ. ಇದು ಒಟ್ಟು 500 ಕೋಟಿ ರೂಪಾಯಿ ಪ್ಯಾಕೇಜ್ ಆಗಿದ್ದು, 10 ಲಕ್ಷ ರೈತರಿಗೆ ನೆರವಾಗಲಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ಹೊರೆಯಾಗಲಿದೆ.
ಅಲ್ಲದೆ, 40,250 ಆಶಾ ಕಾರ್ಯಕರ್ತೆಯರಿಗೂ ಬಿಎಸ್ವೈ ತಲಾ ಮೂರು ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಕುರಿ, ಮೇಕೆಗಳು ಪ್ರಾಕೃತಿಕ ವಿಕೋಪದಿಂದ ಸಾವನ್ನಪ್ಪಿದರೆ ಅವುಗಳ ಮಾಲೀಕರಿಗೆ ಐದು ಸಾವಿರ ರೂಪಾಯಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಅಭಯ ನೀಡಿದ್ದಾರೆ.
1619 ಕೋಟಿ ರೂಪಾಯಿ ಮೊದಲ ಪ್ಯಾಕೇಜ್, 162 ಕೋಟಿ ಮೌಲ್ಯದ ಎರಡನೇ ಪ್ಯಾಕೇಜ್ ಘೋಷಿಸಿದ್ದ ಸಿಎಂ, ಇಂದು ಮೂರನೇ ಪ್ಯಾಕೇಜ್ ಘೋಷಿಸಿದ್ದಾರೆ. ಇದೇ ವೇಳೆ ರೈತರು ಎಲ್ಲಿ ಬೇಕಾದರೂ ಹೋಗಿ ತಮ್ಮ ಬೆಳೆ ಮಾರಾಟ ಮಾಡಬಹುದು. ಎಪಿಎಂಸಿಯಲ್ಲಿ ಒಳ್ಳೆಯ ಬೆಲೆ ಸಿಕ್ಕರೆ ಅಲ್ಲಿಯೂ ಹೋಗಿ ಮಾರಬಹುದು ಎಂದಿದ್ದಾರೆ.