ಬೆಂಗಳೂರು: ಇಂದು ವಿಧಾನ ಪರಿಷತ್ನಲ್ಲಿ ಕ್ಲಬ್ ಹಾಗೂ ಕ್ಲಬ್ ಸಂಸ್ಕೃತಿಯ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಕ್ಲಬ್ಗಳ ಸಮಸ್ಯೆಯ ಕುರಿತು ವಿವರಿಸಲು ಮುಂದಾದ ಕಾಂಗ್ರೆಸ್ ಮುಖಂಡ ಹೆಚ್.ಎಂ ರೇವಣ್ಣರಿಂದ ಆರಂಭವಾದ ಚರ್ಚೆ ಸಾಕಷ್ಟು ಸುದೀರ್ಘವಾಗಿ ಮುಂದುವರಿಯಿತು.
ರೇವಣ್ಣ ಮಾತನಾಡಿದ ಸಂದರ್ಭದಲ್ಲಿ, ಬೆಂಗಳೂರು ಕ್ಲಬ್ ಸೇರಿದಂತೆ ಹಲವು ಕ್ಲಬ್‌ಗಳಿಗೆ ಕಡಿಮೆ ಬೆಲೆಯಲ್ಲಿ ಭೂಮಿ ಬಾಡಿಗೆ ನೀಡಲಾಗಿದೆ. ಆದ್ರೆ ಕೆಲವು ಕ್ಲಬ್‌ಗಳು ಬಿಲ್ಡಿಂಗ್‌ಗಳನ್ನ ನಿರ್ಮಿಸಿ, ದುಬಾರಿ ಬೆಲೆಗೆ ಬಾಡಿಗೆ ನೀಡಿದ್ದಾರೆ. ಕೆಲವು ಕ್ಲಬ್‌ಗಳು ಅಕ್ರಮವಾಗಿ ನಡೆಸುತ್ತಿವೆ. ಹಲವು ದಂಧೆಗಳನ್ನ ನಡೆಸಲಾಗುತ್ತಿದೆ ಎಂದು ಐವಾನ್ ಡಿಸೋಜಾ ಪ್ರಸ್ತಾಪ ಮಾಡಿದರು.
ಬಿಡಿಎ, ಬಿಬಿಎಂಪಿಯಿಂದ ಸಾಕಷ್ಟು ಜಾಗ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಭಾಪತಿಗಳು ಒಪ್ಪಿದರೆ, ಸದನ ಸಮಿತಿ ಮಾಡಲು ನಿರ್ಧರಿಸಲಾಗುತ್ತದೆ ಎಂದು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಈ ವೇಳೆ ತಿಳಿಸಿದರು.
ಗಾಲ್ಫ್ ಕ್ಲಬ್‌ನಲ್ಲಿ ನನ್ನ ಕಾಲರ್ ಇದ್ದ ಡ್ರೆಸ್ ನೋಡಿ ಒಳಗೆ ಬಿಡಲಿಲ್ಲ. ಆದರೆ ನನ್ನ ಮನೆಯವರು ಕ್ಲಬ್ ಒಳಗೆ ಇದ್ದರು ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ಭಾರತೀಯ ಸಂಸ್ಕೃತಿಯ ಉಡುಪು ಧರಿಸಿದಕ್ಕೆ ಒಳಗೆ ಬಿಡಲಿಲ್ಲ ಅಂದ್ರೆ ಅದು ಯಾವುದೋ ಕಿತ್ತೋಗಿರೋ ಕ್ಲಬ್ ಆಗಿರ್ಬೇಕು. ಅದನ್ನು ತೆಗೆದುಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಎಎಸ್ ಕ್ಲಬ್, ಲೇಡಿಸ್ ಕ್ಲಬ್ ಸೇರಿದಂತೆ ಹಲವು ಕ್ಲಬ್‌ಗಳಿವೆ. ಆದರೆ ಶಾಸಕರಿಗೆ ಮಾತ್ರ ಕ್ಲಬ್ ಕೇಳಿದ್ರೆ ಕೊಡಲ್ಲ. ನಮಗೂ ಒಂದು ಕ್ಲಬ್ ಮಾಡಿಕೊಡಬೇಕು ಎಂದು ಪ್ರಕಾಶ್ ರಾಠೋಡ್ ಆಗ್ರಹ ಮಾಡಿದರು.
ಶ್ರೀಕಂಠೇಗೌಡರು ಮಾತನಾಡಿ, ಗಾಲ್ಫ್ ಕ್ಲಬ್ ಜಾಗವನ್ನು ಕೂಡಲೇ ವಶ ಮಾಡಿಕೊಳ್ಳಿ, ಸರ್ಕಾರಿ ಜಾಗವನ್ನು ಬೇರೆ ಯಾರಿಗೋ ಏಕೆ ಕೊಡಬೇಕು. ಅದರ ಅರ್ಧ ಜಾಗದಲ್ಲಿ ಶಾಸಕರಿಗೆ ಕ್ಲಬ್ ಮಾಡಿ. ಉಳಿದರ್ಧ ಜಾಗ ಬೇಕಾದ್ರೆ ಮಾರಾಟ ಮಾಡಿ ಎಂದರು.