ಬೆಂಗಳೂರು: ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದ 3 ದಿನದ ಕೃಷಿಮೇಳಕ್ಕೆ ಇಂದು ತೆರೆ ಬಿದ್ದಿದೆ. ಅಂತಿಮ ದಿನ ಇಂದು ಜನಸಾಗರವೇ ಹರಿದು ಬಂತು.
ಅಕ್ಟೋಬರ್ 24ರಂದು ಪ್ರಾರಂಭವಾದ ಕೃಷಿಮೇಳ-2019ಕ್ಕೆ ಇಂದು ತೆರೆಬಿದ್ದಿತ್ತು. ವಾರಾಂತ್ಯವಿದ್ದ ಕಾರಣ, ಕೃಷಿ ಮೇಳದ ಕೊನೆಯ ದಿನವಾದ ಇಂದು ರಾಜ್ಯದ ವಿವಿಧ ಭಾಗಗಳಿಂದ ರೈತರು,ಮಹಿಳೆಯರು, ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಜನರ ದಂಡೇ ಹರಿದು ಬಂದಿತ್ತು. ಸುಮಾರು 12 ಲಕ್ಷ ಜನ ಮೇಳಕ್ಕೆ ಭೇಟಿ ನೀಡಿದರು. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಸಚಿವ ಜೆ ಸಿ ಮಾಧುಸ್ವಾಮಿ, ಸಂಸದ ಬಚ್ಚೇಗೌಡ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಸಾಧಕ ರೈತರಿಗೆ ಮಾಜಿ ಪ್ರಧಾನಿಮಂತ್ರಿ ಹೆಚ್ ಡಿ ದೇವೇಗೌಡ, ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಕೃಷಿಮೇಳದಲ್ಲಿ ಭಾಗವಹಿಸುತ್ತಿರುವುದು ನನಗೆ ಬಹಳ ಸಂತೋಷ. ಇದೊಂದು ಅದ್ಭುತ ಕಾರ್ಯಕ್ರಮ. ರೈತರಿಗೆ ಹಬ್ಬದಂತಿದೆ. ರೈತರಿಗೆ ಪ್ರೊತ್ಸಾಹ, ಉತ್ತೇಜನ, ನೆರವು ನೀಡುವ ಈ ಕಾರ್ಯಕ್ರಮ, ಬಹಳ ಉತ್ತಮವಾಗಿದೆ. ಧಾರವಾಡ ಕೃಷಿ ಮೇಳದಲ್ಲಿ ಸಾಕಷ್ಟು ಜನ ಸೇರಿದ್ದನ್ನ ಕೇಳಿದ್ದೆ. ಆದರೆ, ಇಲ್ಲಿ ನಾನೇ ಸ್ವತಃ ಜನ ಸಾಗರ ನೋಡುತ್ತಿರುವೆ. ಹಿಂದಿನ ಕಾಲದಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿಗ್ತಾ ಇರಲಿಲ್ಲ.
ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಒಂದು ದಿನದ ಉಪವಾಸಕ್ಕೆ ಕರೆ ನೀಡಿದ್ರು. ಮೊದಲಿಗೆ ನಾವು 60 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡ್ತಾ ಇದ್ರೆ ಈಗ 2280 ಟನ್ ಆಹಾರ ಉತ್ಪಾದನೆ ಆಗ್ತಿದೆ. ಜಾಗತಿಕ ಮಟ್ಟದಲ್ಲಿ ಸ್ವಾವಲಂಬಿಗಳಾಗಿ ಆಹಾರ ಉತ್ಪಾದನೆ ಮಾಡ್ತಾ ಇದ್ದೇವೆ. ರೈತರ ಪರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿವೆ. ಆಹಾರ ಬೆಳೆಗಳಿಗೆ ಕೇಂದ್ರ ಆರು ಸಾವಿರ ರೂ. ಪ್ರೋತ್ಸಾಹ ಧನ ನೀಡಿದೆ. ನಾವು ಹತ್ತು ಸಾವಿರ ಕೊಡ್ತಾ ಇದ್ದೇವೆ. ಹಣ್ಣಿನ ಬೆಳೆಗಳಿಗೆ 18 ಸಾವಿರ ರೂ. ಕೇಂದ್ರ ಸರ್ಕಾರ ಕೊಟ್ಟರೆ, ನಾವು ಹತ್ತು ಸಾವಿರ ಕೊಡ್ತಾ ಇದ್ದೇವೆ. ಈ ಮೂಲಕ ರೈತರಿಗೆ ನೆರವಾಗಿದ್ದೇವೆ ಎಂದರು.