ಬೆಂಗಳೂರು: ಬೀದಿ ನಾಯಿಗಳು ಹಾಗೂ ನಿರ್ಲಕ್ಷಿಸಲ್ಪಟ್ಟ ದೊಡ್ಡ ಪ್ರಾಣಿಗಳಿಗೆ ಮೇವು ಒದಗಿಸಲು ಬಿಬಿಎಂಪಿಯ ಪಶುಪಾಲನಾ ವಿಭಾಗ 15 ಲಕ್ಷ ವೆಚ್ಚ ಮಾಡುತ್ತಿದೆ ಎಂದು ಹಲವು ಸಾಮಾಜಿಕ ಜಾಲತಾಣಗಳು ಹಾಗೂ ಕೆಲ ಮಾಧ್ಯಮಗಳಲ್ಲಿ ವಿರೋಧಗಳು ಕೇಳಿ ಬಂದ ಹಿನ್ನೆಲೆ ಇಂದು ಸ್ಪಷ್ಟೀಕರಣ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿರುವ 3,09,975 ನಾಯಿಗಳಿಗೆ, ಪ್ರತಿ ನಾಯಿಗೆ 5.60 ರೂ ಗಳಂತೆ ಒಟ್ಟು 11,60,000 ರೂ ಬಿಡುಗಡೆ ಮಾಡಲಾಗಿದೆ. ಗೋಶಾಲೆಗಳಿಗೆ ಪ್ರತಿ ದಿನ ಐದು ಟನ್ಗಳಷ್ಟು ಮೇವು ಹಾಗೂ ದೊಡ್ಡ ಪ್ರಾಣಿಗಳ ರಕ್ಷಣಾ ಕಾರ್ಯವನ್ನು ಕ್ಯೂಪಾ ಸಂಸ್ಥೆಗೆ 2 ಟನ್ಗಳಷ್ಟು ಎಂಟು ದಿನಗಳಿಗೆ ಮೇವು ಪೂರೈಕೆ ಮಾಡಲು ಆದೇಶ ನೀಡಲಾಗಿದೆ. ಪ್ರತಿಟನ್ಗೆ 6 ಸಾವಿರದಂತೆ ದನಗಳಿಗೆ 56 ಟನ್ ಮೇವಿಗೆ 3,40,000 ಬಿಡುಗಡೆ ಮಾಡಲಾಗಿದೆ.
ಲಾಕ್ಡೌನ್ನಲ್ಲಿ ಹೋಟೆಲ್, ಬೇಕರಿ, ಇತರ ಅಂಗಡಿಗಳು ಮುಚ್ಚುವುದರಿಂದ ಬೀದಿನಾಯಿಗಳಿಗಾಗುವ ಆಹಾರದ ಸಮಸ್ಯೆ ನೀಗಿಸಲು ಪ್ರಾಣಿಪ್ರಿಯರು, ಇಂಡಿಯನ್ ವೆಲ್ಫೇರ್ ಆರ್ಗನೈಸೇಷನ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪಶುಪಾಲನಾ ವಿಭಾಗ ಅರ್ಥಪೂರ್ಣ ಕಾರ್ಯಕ್ರಮ ಕೈಗೊಂಡಿದೆ.
ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬೀಸ್ ಚುಚ್ಚುಮದ್ದು ನಿರ್ವಹಿಸುವ ಸೇವಾ ಸಂಸ್ಥೆಗಳಿಗೆ ಬೀದಿನಾಯಿಗಳಿಗೆ ಆಹಾರ ಪೂರೈಸುವ ಜವಾಬ್ದಾರಿ ನೀಡಲಾಗಿದೆ. ಆಹಾರ ಪೂರೈಕೆ ಮಾಡುವ ಸಂದರ್ಭದ ಫೋಟೋಗಳನ್ನು ಸಂಬಂಧಪಟ್ಟ ವಲಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲಾಗುತ್ತಿದ್ದು, ಸಂಪೂರ್ಣ ಮೇಲ್ವಿಚಾರಣೆ ಇವರದೇ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಇನ್ನು ಬಿಡುಗಡೆಗೊಳಿಸಿರುವ ಅನುದಾನದ ಮೊತ್ತವನ್ನು ಇಂದಿನವರೆಗೂ ಯಾವುದೇ ಸೇವಾ ಸಂಸ್ಥೆಯವರಿಗೆ ಪಾವತಿಸಿಲ್ಲ. ಸೇವಾಸಂಸ್ಥೆಯವರೇ ಮುಂಗಡವಾಗಿ ಖರ್ಚು ಮಾಡುತ್ತಿದ್ದಾರೆ. ನಂತರ ದಾಖಲಾತಿಗಳು ನಿಯಮಾನುಸಾರವಾಗಿದ್ದಲ್ಲಿ, ಭರಿಸಿರುವ ಖರ್ಚು ವೆಚ್ಚವನ್ನು ವಲಯ ಸಹಾಯಕ ನಿರ್ದೇಶಕರು ಸಂಬಂಧಪಟ್ಟ ವಲಯ ಹಣಕಾಸಿನ ವಿಭಾಗದಲ್ಲಿ ಮರುಪಾವತಿಗೆ ಕ್ರಮವಹಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದೆ.