ಬೆಂಗಳೂರು: ಕೊರೊನಾ ದಾಳಿಯಿಂದಾಗಿ ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗಿದ್ದು, ಸಂಭ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಂ.ಜಿ.ರೋಡ್, ಬಿಗ್ರೇಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದಲ್ಲಿ 8500ಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಕೈಗೊಂಡಿರುವ ಪೊಲೀಸ್ ಭದ್ರತಾ ಕ್ರಮಗಳ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಆಯುಕ್ತರು, 5200 ಪೊಲೀಸ್ ಕಾನ್ ಸ್ಟೇಬಲ್, ಹೆಡ್ಕಾನ್ಸ್ಟೇಬಲ್ 1800, ಎಎಸ್ಐ 800, ಪಿಎಸ್ಐ, 600, ಇನ್ಸ್ಪೆಕ್ಟರ್160 ಸೇರಿದಂತೆ ಹಿರಿಯ ಅಧಿಕಾರಿಗಳು ಒಳಗೊಂಡಂತೆ 8 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಜನರು ಹೆಚ್ಚಾಗಿ ಸೇರುವ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ ರೋಡ್ನಲ್ಲಿ 4 ಮಂದಿ ಡಿಸಿಪಿ, 10 ಎಸಿಪಿ, 30 ಇನ್ ಸ್ಪೆಕ್ಟರ್ ಒಳಗೊಂಡಂತೆ 3 ಸಾವಿರ ಪೊಲೀಸರನ್ನು ಭದ್ರತೆಗೆ ಇರಲಿದ್ದಾರೆ. ಹೊಸ ವರ್ಷಾಚರಣೆ ಸಂಭ್ರಮಿಸಲು ಬರುವ ಜನರನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಪಿಕೆಟಿಂಗ್ ಪಾಯಿಂಟ್, ವುಮೆನ್ ಸೇಫ್ಟಿ ಐಸ್ ಲ್ಯಾಂಡ್ ತೆರೆಯಲಾಗುವುದು. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗಾಗಿ ವಾಚ್ ಟವರ್ ನಿರ್ಮಿಸಲಾಗುವುದು ಎಂದರು.
ಡಿಸೆಂಬರ್ 31 ರಂದು ಬಿಗ್ರೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎಂಜಿ ರೋಡ್ನಲ್ಲಿ ಪ್ರವೇಶದ್ವಾರದಲ್ಲಿ ಮೆಟೆಲ್ ಡಿಟೆಕ್ಟರ್ ಉಪಕರಣ ಅಳವಡಿಸಲಾಗುವುದು. ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರೂ ಪ್ರವೇಶಿಸುವಾಗ ಮುಖ ಚಹರೆ ಪತ್ತೆಗಾಗಿ ಮಾಸ್ಕ್ ತೆಗೆಯಬೇಕು. ಅದೇ ರೀತಿ ಕೋರಮಂಗಲ, ಇಂದಿರಾನಗರ, ವೈಟ್ಪೀಲ್ಡ್ ಏರಿಯಾಗಳಲ್ಲಿ 2500 ಪೊಲೀಸರನ್ನು ನಿಯೋಜಿಸಲಾಗುವುದು. ಹೆಚ್ಚುವರಿಯಾಗಿ 20 ಡ್ರೋಣ್ ಕ್ಯಾಮೆರಾ ಕಣ್ಗಾವಲು ಇರಲಿದೆ ಎಂದರು.
344 ಕೆಜಿ ಡ್ರಗ್ಸ್ ವಶ: ನ್ಯೂ ಇಯರ್ ಹಿನ್ನೆಲೆ ಡ್ರಗ್ಸ್ ಸಾಗಾಟ ತಡೆಯುವ ದೃಷ್ಟಿಯಿಂದ ಡಿಸೆಂಬರ್ನಲ್ಲಿ 6 ವಿದೇಶಿಯರು ಸೇರಿ 637 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 344 ಕೆಜಿ ಡ್ರಗ್ಸ್ ಜಪ್ತಿ ಮಾಡಿ 547 ಕೇಸ್ ದಾಖಲಿಸಲಾಗಿದೆ. ಮಧ್ಯರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆ ಕಾರ್ಯಕ್ರಮ ನಡೆಸಲು ಅನುಮತಿಯಿದೆ. ಗಡುವು ಮೀರಿ ಕಾನೂನು ಬಾಹಿರವಾಗಿ ಕಾರ್ಯಕ್ರಮ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಓದಿ: ಹೊಸ ವರ್ಷಾಚರಣೆಗೆ ಬಿಬಿಎಂಪಿ ಗೈಡ್‌ಲೈನ್ಸ್: ಈ ನಿಯಮಗಳು ನಿಮಗೆ ಗೊತ್ತಿರಲಿ..