ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿ ನಾಯಕರ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸಿಎಂ ಬಿಎಸ್ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಆರ್.ಅಶೋಕ್ ಸೇರಿದಂತೆ ಸಚಿವರು ಶಾಸಕರು ಭಾಗವಹಿಸಿದ್ದರು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, ಪೌರತ್ವ ಕಾಯಿದೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ನಮ್ಮ ಪ್ರತಿಪಕ್ಷ ನಾಯಕರುಗಳು ನಾಲೆಡ್ಜ್ ಫ್ರೂಫ್ ಹಾಗೂ ಇನ್ ಫರ್ಮೇಷನ್ ಫ್ರೂಫ್ ಆಗಿದ್ದಾರೆ. ಅವರ ತಲೆಗೆ ಮಾಹಿತಿಯೂ ಹೋಗಲ್ಲ. ಬುದ್ದಿಮತ್ತೆಯೂ ಹೋಗಲ್ಲ. ಅದಕ್ಕೆ ಪೌರತ್ವ ಕಾಯ್ದೆಯನ್ನು ಆಧರಿಸಿ ವಿಚಾರಹೀನ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಪೌರತ್ವ ಕಾಯ್ದೆ ಯಾರ ವಿರೋಧಿಯೂ ಅಲ್ಲ ಎಂದರು.
ಸೋನಿಯಾಗಾಂಧಿ ಭಾರತೀಯರಾದ ರಾಜೀವ್ ಗಾಂಧಿ ಅವರನ್ನು ವಿವಾಹವಾದ 12 ವರ್ಷಗಳ ಬಳಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ರು. ಅವರಿಗೆ ಪೌರತ್ವ ನೀಡಬೇಕಾದರೆ ಅವರ ಧರ್ಮ ಯಾವುದು ಎಂದು ಪ್ರಶ್ನಿಸಿದರೇನು. ವಿಶ್ವದ ಯಾವುದೇ ದೇಶದ ಮುಸ್ಲಿಂ ಭಾರತದ ಪೌರತ್ವ ಪಡೆಯಬಹುದು. ಆದರೆ, ಅವರು ಪೌರತ್ವ ಕಾಯ್ದೆ ನಿಯಮಾವಳಿಗಳನ್ನು ಪೂರ್ಣಗೊಳಿಸಬೇಕು. ಪಾಕಿಸ್ತಾನಿ ನಾಗರೀಕರಾಗಿದ್ದ ಹಿನ್ನೆಲೆ ಗಾಯಕ ಅದ್ನಾನ್ ಸಾಮಿ ಭಾರತೀಯ ಪೌರತ್ವ ಪಡೆದರು. ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲೇ ಅದ್ನಾನ್ ಸಮಿಗೆ ಪೌರತ್ವ ನೀಡಲಾಯ್ತು. ಅವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನಿರಾಕರಿಸಲಿಲ್ಲ. ಏಕೆಂದರೆ ಅವರು ಕಾನೂನು ಬದ್ದ ನಿಯಮಾವಳಿಗಳನ್ನು ಪೂರೈಸಿದ್ರು ಎಂದರು.
ಅಲ್ಲದೇ ಇಸ್ಲಾಮ್ ನ 72 ಪಂಗಡದವರು ವಾಸ ಮಾಡುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪಾಕಿಸ್ತಾನ ಹಾಗಲ್ಲ. ಅದು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. 1952ರಲ್ಲಿ ಪಾಕಿಸ್ತಾನದ ಪ್ರಧಾನಿಯೇ ಮುಸ್ಲಿಂ ಹಾಗೂ ಮುಸ್ಲಿಮೇತರರನ್ನು ಸಮಾನವಾಗಿ ಕಾಣುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ರು. ಹಾಗಾಗಿಯೇ ಪಾಕಿಸ್ತಾನದ ಕಡೆಯಿಂದ ಮುಸ್ಲಿಮೇತರರ ವಲಸೆ ಹೆಚ್ಚಾಯಿತು.1970ರಲ್ಲಿ ನಿರ್ಮಾಣವಾದ ಬಾಂಗ್ಲಾದೇಶ ಕೂಡ ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಮುಸ್ಲಿಮೇತರರಿಗೆ ಅಲ್ಲಿ ನಿರಂತರ ಕಿರುಕುಳ ನಡೆಯುತ್ತಲೇ ಇದೆ. ಅಲ್ಲಿಂದಲೂ ಭಾರತಕ್ಕೆ ವಲಸೆ ಹೆಚ್ಚಾಗಿದೆ. ಎನ್ಆರ್ಸಿ ಪ್ರಕ್ರಿಯೆಯೇ ಶುರುವಾಗಿಲ್ಲ. ಆಗಲೇ ಪ್ರತಿಪಕ್ಷಗಳವರು ಗಲಾಟೆ ಮಾಡುತ್ತಿದ್ದಾರೆ. ಮದುವೆಯೇ ಆಗಿಲ್ಲ. ಮಗುವಿನ ಬಗ್ಗೆ ಗಲಾಟೆ ಮಾಡಿದಂತೆ ಇದು ಎಂದರು.
ಸಭೆಗೆ ಅನೇಕ ಶಾಸಕರು, ಸಂಸದರು ಗೈರು : ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಾಲ್ಗೊಂಡ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಬಹುತೇಕ ಗೈರಾಗಿದ್ದರು. ಬಿಜೆಪಿ ಶಾಸಕರ ಗೈರು ಹಾಜರಾತಿಯಿಂದ ರಾಷ್ಟ್ರೀಯ ಬಿಜೆಪಿ ನಾಯಕನ ಮುಂದೆ ಮುಜುಗರ ಅನುಭವಿಸಿದಂತಾಯಿತು. ಸಂಸದರ ಪೈಕಿ , ಪ್ರತಾಪ್ ಸಿಂಹ್, ರಮೇಶ ಜಿಗಜಿಣಗಿ, ಬಿ.ವೈ.ರಾಘವೇಂದ್ರ, ಆನೇಕಲ್ ನಾರಾಯಣಸ್ವಾಮಿ, ಗದ್ದಿಗೌಡರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಗೈರಾಗಿದ್ದರು.
ಸಭೆ ಬಳಿಕ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಗೊಂದಲ ಮೂಡಿಸಿ, ಅಲ್ಪಸಂಖ್ಯಾತರಲ್ಲಿ ತಪ್ಪು ಭಾವನೆ ಉಂಟು ಮಾಡುವ ಪ್ರಯತ್ನ ವಿರೋಧ ಪಕ್ಷಗಳು ಮಾಡುತ್ತಿವೆ. ನಮ್ಮ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಜನರ ಮನೆ ಮನೆಗೆ ಹೋಗಿ ಈ ಕಾಯ್ದೆ ಬಗ್ಗೆ ಸತ್ಯ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡನೇ ತಾರೀಖು ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ, ಕಾಯಿದೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಎಲ್ಲ ಪ್ರಮುಖ ನಗರಗಳಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.