ಭಾರತದ ಮೂರನೇ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎರಡು ವಾರಗಳ ಹಿಂದೆ ಉಡಾವಣೆಗೊಂಡಿದೆ. ಈ ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲಿನ ತನ್ನ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿದ್ದು, ಈಗ ಚಂದ್ರನೆಡೆಗೆ ಮುಖ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದೆ. ಬಾಹ್ಯಾಕಾಶ ನೌಕೆ ಚಂದ್ರನ ಗುರುತ್ವಾಕರ್ಷಣಾ ವಲಯವನ್ನು ಪ್ರವೇಶಿಸುವುದು ಚಂದ್ರನೆಡೆಗಿನ ಪ್ರಯಾಣದಲ್ಲಿ ಮಹತ್ತರ ಅಂಶವಾಗಿದೆ. ಈಗ ಸ್ಪೇಸ್‌ಕ್ರಾಫ್ಟ್ ತನ್ನ ಪ್ರಯಾಣದ ಅಂತಿಮ ಹಂತದಲ್ಲಿದ್ದು, ಶೀಘ್ರವಾಗಿ ತನ್ನ ಗುರಿಯನ್ನು ತಲುಪಲಿದೆ. ಚಂದ್ರಯಾನ -3 ಮುಂದಿನ ಹಂತದ ಕುರಿತು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ವಿವರಣೆ ಇಲ್ಲಿದೆ..
ಭಾರತದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ -3 ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತ್ತು. ಇದೀಗ ಚಂದ್ರನೆಡೆಗೆ ಪ್ರಯಾಣ ಬೆಳೆಸಿರುವ ಚಂದ್ರಯಾನ-3 ಯೋಜನೆ ಹಂತ ಹಂತವಾಗಿ ಐದು ಬಾರಿ ಕಕ್ಷೆ ಎತ್ತರಿಸಲ್ಪಟ್ಟಿದೆ. ಅದು ತನ್ನ ಮೂರನೇ ಎರಡರಷ್ಟು ಪ್ರಯಾಣವನ್ನು ಪೂರ್ಣಗೊಳಿಸಿದ್ದು, ಈಗ ತನ್ನ ಗುರಿಯಾದ ಚಂದ್ರನೆಡೆಗೆ ಸಾಗುತ್ತಿದೆ. ಆಗಸ್ಟ್ 5ರ ಶನಿವಾರ ಸಂಜೆ 7 ಗಂಟೆಗೆ ಲೂನಾರ್ ಆರ್ಬಿಟ್ ಇನ್‌ಸರ್ಷನ್ (ಎಲ್ಐಒ - ಚಂದ್ರನ ಕಕ್ಷೆಗೆ ಸೇರಿಸುವಿಕೆ) ಮೂಲಕ ಚಂದ್ರಯಾನ-3 ಚಂದ್ರನನ್ನು ತಲುಪಲಿದೆ ಎಂದು ಇಸ್ರೋ ಹೇಳಿದೆ.
ಆಗಸ್ಟ್ 1ರಂದು, ಬಾಹ್ಯಾಕಾಶ ನೌಕೆ ತನ್ನ ಇಂಜಿನ್ ಅನ್ನು ಆರಂಭಿಸಿ, ಚಂದ್ರನ ಕಕ್ಷೆಯ ಬಳಿಗೆ ತಲುಪಿತ್ತು. ಇದಕ್ಕಾಗಿ ಒಂದು ನಿರ್ಣಾಯಕವಾದ ಚಲನೆಯನ್ನು ನಡೆಸಿ, ಭೂಮಿಯ ಕಕ್ಷೆಯಿಂದ ಚಂದ್ರನ ಕಡೆಗೆ ತೆರಳಿತು. ಈ ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್ಐ) ಸ್ಪೇಸ್‌ಕ್ರಾಫ್ಟ್ ಭೂಮಿಯ ಗುರುತ್ವಾಕರ್ಷಣಾ ಬಲವನ್ನು ಮೀರಿ, ಚಂದ್ರನ ಸಮೀಪಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿತು. ಈಗ ಚಂದ್ರಯಾನ-3 ಚಂದ್ರನ ಗುರುತ್ವಾಕರ್ಷಣಾ ಬಲದ ವಲಯದಲ್ಲಿದೆ. ಚಂದ್ರಯಾನ-3 ಯಶಸ್ವಿಯಾಗಿ ಎಲ್ಒಐ ನಿರ್ವಹಿಸಿದ ಬಳಿಕ, ಅದು ಚಂದ್ರನ ಸುತ್ತಲಿನ ಕಕ್ಷೆಗೆ ಸೇರಲಿದೆ.
ಭೂಮಿಯ ಗುರುತ್ವಾಕರ್ಷಣೆಯಿಂದ ಹೊರ ಚಲನೆ : ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್ಐ) ಪ್ರಕ್ರಿಯೆ ಚಂದ್ರಯಾನ-3ನ್ನು ಲೂನಾರ್ ಟ್ರಾನ್ಸ್‌ಫರ್ ಟ್ರಾಜೆಕ್ಟರಿ ಎಂಬ ಪಥಕ್ಕೆ ಜೋಡಿಸಿದ್ದು, ಅದು ಸ್ಪೇಸ್‌ಕ್ರಾಫ್ಟ್ ಅನ್ನು ಲೋ ಅರ್ತ್ ಆರ್ಬಿಟ್‌ನಿಂದ (ಎಲ್ಇಒ) ಚಂದ್ರನ ಕಡೆಗೆ ಒಯ್ಯಲಿದೆ. ಟಿಎಲ್ಐ ದಹನ ಸಾಮಾನ್ಯವಾಗಿ ಪೆರಿಜೀ ಇಂಜಿನ್ ಎಂದು ಕರೆಯಲಾಗುವ ರಾಸಾಯನಿಕ ರಾಕೆಟ್ ಇಂಜಿನ್ ಮೂಲಕ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಸ್ಪೇಸ್‌ಕ್ರಾಫ್ಟ್ ವೇಗವನ್ನು ಪ್ರತಿ ಸೆಕೆಂಡಿಗೆ 3 ಕಿಲೋಮೀಟರ್‌ಗಳಷ್ಟು ಹೆಚ್ಚಿಸುತ್ತದೆ. ಈ ವೇಗದ ಹೆಚ್ಚಳ ಅದಕ್ಕೆ ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ, ಚಂದ್ರನನ್ನು ಸೇರಲು ಸಹಾಯವಾಗುತ್ತದೆ.
ಟಿಎಲ್ಐ ದಹನವನ್ನು ಸೂಕ್ತ ಸಮಯದಲ್ಲಿ ನಡೆಸಲಾಗುತ್ತದೆ. ಆ ಮೂಲಕ ಚಂದ್ರ ಸರಿಯಾದ ಸ್ಥಾನದಲ್ಲಿರುವಾಗ ಸ್ಪೇಸ್‌ಕ್ರಾಫ್ಟ್ ಚಂದ್ರನ ಗುರುತ್ವಾಕರ್ಷಣಾ ವಲಯವನ್ನು ತಲುಪಲು ಸಾಧ್ಯವಾಗುತ್ತದೆ. ಬಳಿಕ ಚಂದ್ರನ ಗುರುತ್ವಾಕರ್ಷಣಾ ಬಲ ಸ್ಪೇಸ್‌ಕ್ರಾಫ್ಟ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಸ್ಪೇಸ್‌ಕ್ರಾಫ್ಟ್ ಚಂದ್ರನ ಸುತ್ತ ಸುತ್ತಲು ಆರಂಭಿಸುತ್ತದೆ. ಚಂದ್ರನೆಡೆಗಿನ ಚಲನೆಯಲ್ಲಿ ಟಿಎಲ್ಐ ಒಂದು ಮಹತ್ವದ ಹಂತವಾಗಿದೆ. ಇದು ಸ್ಪೇಸ್‌ಕ್ರಾಫ್ಟ್ ತನ್ನ ಗುರಿಯನ್ನು ಸುರಕ್ಷಿತವಾಗಿ ತಲುಪುವಂತೆ ಮಾಡುತ್ತದೆ.
ಆಗಸ್ಟ್ 5ರಂದು ಏನಾಗಲಿದೆ? : ಸಂಜೆ ಸುಮಾರು 7 ಗಂಟೆಯ ವೇಳೆಗೆ, ಚಂದ್ರಯಾನ-3 ಮಹತ್ವಪೂರ್ಣವಾದ ಲೂನಾರ್ ಆರ್ಬಿಟ್ ಇನ್‌ಸರ್ಷನ್ (ಎಲ್ಒಐ) ನಡೆಸಿ, ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ. ಇದನ್ನು ಸಾಮಾನ್ಯವಾಗಿ ಸ್ಪೇಸ್‌ಕ್ರಾಫ್ಟ್ ಭೂಮಿಯ ಕಕ್ಷೆಯನ್ನು ಬಿಟ್ಟು, ಚಂದ್ರನೆಡೆಗೆ ತೆರಳಿದ ಬಳಿಕ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಸ್ಪೇಸ್‌ಕ್ರಾಫ್ಟ್ ಇಂಜಿನ್‌ಗಳು ದಹನ ಆರಂಭಿಸಿ, ವೇಗವನ್ನು ಕಡಿಮೆಗೊಳಿಸಿ, ಸ್ಪೇಸ್‌ಕ್ರಾಫ್ಟ್ ಅನ್ನು ಚಂದ್ರನ ಸುತ್ತಲಿನ ಸ್ಥಿರವಾದ ಕಕ್ಷೆಗೆ ಜೋಡಿಸುತ್ತದೆ. ಒಂದು ವೇಳೆ ಎಲ್ಒಐ ಹಂತವನ್ನು ಸರಿಯಾಗಿ ನಡೆಸಲು ಸಾಧ್ಯವಾಗದಿದ್ದರೆ, ಸ್ಪೇಸ್‌ಕ್ರಾಫ್ಟ್ ಚಂದ್ರನನ್ನು ತಪ್ಪಿಸಿಕೊಳ್ಳಬಹುದು. ಅಥವಾ ಅದು ಅಸ್ಥಿರವಾದ ಕಕ್ಷೆಗೆ ಪ್ರವೇಶಿಸಿ, ಅಂತಿಮವಾಗಿ ಸ್ಪೇಸ್‌ಕ್ರಾಫ್ಟ್ ಪತನಗೊಳ್ಳುವಂತಾಗಬಹುದು.
ಟಿಎಲ್ಐ ನಡೆದ ಬಳಿಕ, ಚಂದ್ರನ ಕಕ್ಷೆಗೆ ಸೇರಿಸುವ ಪ್ರಕ್ರಿಯೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ವಿವಿಧ ಕಾರಣಗಳ ಅನುಸಾರ ಬದಲಾಗಬಲ್ಲದು. ಅದಕ್ಕೆ ಕೆಲವು ಕಾರಣಗಳೆಂದರೆ:
ಸ್ಪೇಸ್‌ಕ್ರಾಫ್ಟ್ ಸರಿಯಾದ ಉಡಾವಣಾ ಅವಕಾಶಕ್ಕೆ ಕಾಯಬೇಕಾಗುತ್ತದೆ: ಭೂಮಿಯ ಸುತ್ತ ಇರುವ ಚಂದ್ರನ ಕಕ್ಷೆ ಸಂಪೂರ್ಣವಾಗಿ ವೃತ್ತಾಕಾರವಾಗಿಲ್ಲ. ಆದ್ದರಿಂದ, ಚಂದ್ರನನ್ನು ತಲುಪಲು ಸುಲಭವಾಗುವ ಕೆಲ ನಿರ್ದಿಷ್ಟ ಸಮಯಗಳಿರುತ್ತವೆ. ಸ್ಪೇಸ್‌ಕ್ರಾಫ್ಟ್ ಇಂಧನ ಉಳಿಸಲು ಮತ್ತು ಯಶಸ್ವಿಯಾಗಿ ಗುರಿ ತಲುಪಲು ಇಂತಹ ಅವಕಾಶಕ್ಕೆ (ಲಾಂಚ್ ವಿಂಡೋ) ಕಾಯಬೇಕಾಗುತ್ತದೆ.
ಸ್ಪೇಸ್‌ಕ್ರಾಫ್ಟ್ ತನ್ನ ಪಥವನ್ನು ಹೊಂದಿಸಬೇಕಾಗುತ್ತದೆ: ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಬಳಿಕ, ಸ್ಪೇಸ್‌ಕ್ರಾಫ್ಟ್ ಚಲಿಸುವ ಪಥ ಚಂದ್ರನ ಕಕ್ಷೆಗೆ ಸಮರ್ಪಕವಾಗಿ ಜೋಡಣೆಯಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ಸ್ಪೇಸ್‌ಕ್ರಾಫ್ಟ್ ತನ್ನ ಪಥದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು, ಚಂದ್ರನ ಮೇಲೆ ಸರಿಯಾದ ಸ್ಥಳದಲ್ಲಿ ಪ್ರವೇಶಿಸುವಂತೆ ಮಾಡಬೇಕಾಗುತ್ತದೆ.
ಸ್ಪೇಸ್‌ಕ್ರಾಫ್ಟ್ ಇತರ ಚಲನೆಗಳನ್ನು ನಡೆಸಬೇಕಾಗಿ ಬರಬಹುದು: ಎಲ್ಒಐ ಜೊತೆಗೆ, ಸ್ಪೇಸ್‌ಕ್ರಾಫ್ಟ್ ಚಲನೆಯ ಮಧ್ಯದಲ್ಲಿ ಪಥ ಸರಿಪಡಿಸುವಿಕೆ, ಅಥವಾ ಲೂನಾರ್ ಫ್ಲೈ ಬೈ ರೀತಿಯ ಚಲನೆಗಳನ್ನು ನಡೆಸಬೇಕಾಗಿ ಬರಬಹುದು. ಈ ರೀತಿಯ ಹೆಚ್ಚಿನ ನಡೆಗಳು ಒಟ್ಟು ಯೋಜನೆ ಹೆಚ್ಚಿನ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ.
ಚಂದ್ರಯಾನ-3ರ ಮುಂದಿನ ಹಾದಿ : ಈಗ ಬಾಹ್ಯಾಕಾಶ ನೌಕೆ ಚಂದ್ರನ ಪ್ರಭಾವದ ವಲಯದಲ್ಲಿದೆ. ಸ್ಪೇಸ್‌ಕ್ರಾಫ್ಟ್ ಮುಂದಿನ ಕೆಲ ದಿನಗಳ ಕಾಲ ತನ್ನ ಪಥವನ್ನು ಇನ್ನಷ್ಟು ಸರಿಪಡಿಸುವ ಸಲುವಾಗಿ ಚಂದ್ರನ ಸುತ್ತ ಚಲಿಸಿ, ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹಕ್ಕೆ ತೆರಳಲಿದೆ. ಇದು ಚಂದ್ರನ ಮೇಲ್ಮೈಗೆ ಸನಿಹದಲ್ಲಿರುವ ನೂರು ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಲಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೊದಲು ಸ್ಪೇಸ್‌ಕ್ರಾಫ್ಟ್ ತನ್ನನ್ನು ತಾನು ಸರಿಯಾದ ರೀತಿಯಲ್ಲಿ ಇಡುತ್ತದೆ.
ಆಗಸ್ಟ್ 17 ಇಸ್ರೋದ ಪಾಲಿಗೆ ಮುಂದಿನ ಅತಿದೊಡ್ಡ ದಿನವಾಗಿದೆ. ಅಂದು ಇಸ್ರೋ ಲ್ಯಾಂಡಿಂಗ್ ಮಾಡ್ಯುಲ್‌ನ್ನು ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಡಿಸುತ್ತದೆ. ಲ್ಯಾಂಡಿಂಗ್ ಮಾಡ್ಯುಲ್ ಆಗಿರುವ ವಿಕ್ರಮ್ ತನ್ನೊಳಗೆ ಪ್ರಗ್ಯಾನ್ ಎಂಬ ರೋವರ್ ಅನ್ನು ಹೊಂದಿದೆ. ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟ ಬಳಿಕ ವಿಕ್ರಮ್ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯಲು ಪ್ರಯತ್ನಿಸಲಿದೆ. ಕಾರ್ಯಾಚರಣೆಯ ಈ ಭಾಗ ಅತ್ಯಂತ ಮಹತ್ವದ್ದಾಗಿದ್ದು, ಲ್ಯಾಂಡಿಂಗ್ ಮಾಡ್ಯುಲ್ ಸ್ವತಂತ್ರವಾಗಿ ಚಲಿಸಿ, ಚಂದ್ರನ ಮೇಲೆ ನಿಖರವಾಗಿ ಇಳಿಯುವಂತೆ ಮಾಡುತ್ತದೆ.
ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದ ಬಳಿಕ, ರೋವರ್ ಪ್ರಗ್ಯಾನ್ ಲ್ಯಾಂಡರ್ ವಿಕ್ರಮ್‌ನಿಂದ ಹೊರಬರಲಿದೆ. ವಿಕ್ರಮ್ ಮತ್ತು ಪ್ರಗ್ಯಾನ್‌ಗಳು ಬಳಿಕ ಚಂದ್ರನ ಮೇಲ್ಮೈಯಲ್ಲಿ ಇನ್ ಸಿತು ಪ್ರಯೋಗಗಳನ್ನು ನಡೆಸಲಿದೆ. ಇನ್ ಸಿತು ಪ್ರಯೋಗಗಳೆಂದರೆ, ಚಂದ್ರನ ಮೇಲ್ಮೈಯಿಂದ ಯಾವುದೇ ವಸ್ತುಗಳನ್ನು ತರದೆ, ಅಲ್ಲಿಯೇ ಪರೀಕ್ಷೆ ಮತ್ತು ವಿಶ್ಲೇಷಣೆಗಳನ್ನು ನಡೆಸುವುದಾಗಿದೆ. ಈ ಪ್ರಯೋಗಗಳು ಚಂದ್ರನ ವಾತಾವರಣ, ಚಂದ್ರನ ಮೇಲ್ಮೈ ಸಂಯುಕ್ತಗಳು ಮತ್ತು ಇತರ ವೈಜ್ಞಾನಿಕ ಮಾಹಿತಿಗಳನ್ನು ನೀಡಿ, ಚಂದ್ರನ ಕುರಿತ ನಮ್ಮ ಜ್ಞಾನವನ್ನು ವಿಸ್ತರಿಸಲು ನೆರವಾಗಲಿದೆ. ಈ ಜ್ಞಾನ ಭವಿಷ್ಯದ ಚಂದ್ರ ಅನ್ವೇಷಣಾ ಯೋಜನೆಗಳಿಗೆ ಪೂರಕವಾಗಿರಲಿದೆ.
ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಪ್ರೊಪಲ್ಷನ್ ಮಾಡ್ಯುಲ್ ಚಂದ್ರನ ಸುತ್ತಲೂ ಸುತ್ತುವುದನ್ನು ಮುಂದುವರಿಸಲಿದೆ. ಅಂದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿದು, ರೋವರ್ ಪ್ರಗ್ಯಾನ್ ಕಾರ್ಯಾಚರಣೆ ಆರಂಭಿಸಿದ ಬಳಿಕವೂ ಪ್ರೊಪಲ್ಷನ್ ಮಾಡ್ಯುಲ್ ಚಂದ್ರನ ಮೇಲ್ಮೈಯಲ್ಲಿ ಇಳಿಯದೆ, ಚಂದ್ರನ ಸುತ್ತಲೂ ಕಕ್ಷೆಯಲ್ಲಿ ಚಲಿಸಲಿದೆ. ಕಕ್ಷೆಯಲ್ಲಿ ಮುಂದುವರಿಯುವ ಮೂಲಕ ಪ್ರೊಪಲ್ಷನ್ ಮಾಡ್ಯುಲ್ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ, ಮಹತ್ವದ ಮಾಹಿತಿಗಳನ್ನು ಕಲೆಹಾಕಲಿದೆ. ಇದರಿಂದ ಚಂದ್ರನ ವಾತಾವರಣದ ಅನ್ವೇಷಣೆ ಸಾಧ್ಯವಾಗಿ, ಚಂದ್ರನ ಗುರುತ್ವಾಕರ್ಷಣಾ ವಲಯದ ಅಧ್ಯಯನ ನಡೆಸಿ, ಚಂದ್ರನ ಮೇಲ್ಮೈಯ ಮ್ಯಾಪಿಂಗ್ ನಡೆಸಲಾಗುತ್ತದೆ. ಈ ಮಾಹಿತಿಗಳು ನಮಗೆ ಚಂದ್ರನ ಮೇಲ್ಮೈ ಸಂಯುಕ್ತಗಳ ಕುರಿತಾದ ಮಾಹಿತಿ ನೀಡಿ, ಭವಿಷ್ಯದ ಮಾನವ ಸಹಿತ ಚಂದ್ರಯಾನ ಯೋಜನೆಗಳಿಗೆ ನೆರವಾಗಲಿದೆ.
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು