ಬೆಂಗಳೂರು: ಆಟವಾಡುವಾಗ ಆಯತಪ್ಪಿ ಮೂರು ವರ್ಷದ ಗಂಡು ಮಗು ರಾಜಕಾಲುವೆಗೆ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ರಾಜಕಾಲುವೆಗೆ ಬಿದ್ದಿರುವ ಬಾಲಕನಿಗಾಗಿ ಅಗ್ನಿಶಾಮಕದಳ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಪತ್ತೆಯಾಗಿಲ್ಲ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆಯ ಅಪಾರ್ಟ್ಮೆಂಟ್ವೊಂದರ ಬಳಿ ರಾಜಕಾಲುವೆಗೆ ಮೂರು ವರ್ಷದ ಕಬೀರ್ ಸೌದ್ ಬಿದ್ದು ನಾಪತ್ತೆಯಾಗಿದ್ದಾನೆ. ನೇಪಾಳ ಮೂಲದ ಬಿನೋದ್ ಸೌದ್ ಹಾಗೂ ಸ್ವಪ್ನ ದಂಪತಿಯ ಪುತ್ರನಾಗಿರುವ ಕಬೀರ್, ನಿನ್ನೆ ಮಕ್ಕಳೊಂದಿಗೆ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದಾನೆ.
ಕೆಲ ಹೊತ್ತಿನ ಬಳಿಕ ನಾಪತ್ತೆಯಾಗಿದ್ದ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕಬೀರ್ ಜೊತೆ ಆಟವಾಡುತ್ತಿದ್ದ ಮಕ್ಕಳಿಗೆ ಕೇಳಿದಾಗ ರಾಜಕಾಲುವೆಯತ್ತ ಬೊಟ್ಟು ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ವರ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆ ಅಗ್ನಿಶಾಮಕತಂಡ ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ: ಸ್ವಂತಿಕೆ ಗೀಳಿಗೆ ಹೋಯ್ತು ಪ್ರಾಣ.. ಸೆಲ್ಫಿ ವೇಳೆ ನದಿಗೆ ಬಿದ್ದ ಒಂದೇ ಕುಟುಂಬದ ನಾಲ್ವರು ಹುಡುಗಿಯರು
ಸೋಮವಾರ ಸಹ ಮಗುವಿಗಾಗಿ ಶೋಧ ನಡೆಸಿದರೂ ಪತ್ತೆಯಾಗದಿರುವುದು ಪೋಷಕರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ. ಮಳೆ ಹಿನ್ನೆಲೆ ರಾಜಕಾಲುವೆಯಲ್ಲಿ ವೇಗವಾಗಿ ನೀರು ಹರಿಯುತ್ತಿದೆ. ಇಂದು 100 ಮೀಟರ್ವರೆಗೂ ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ನೇಪಾಳ ಮೂಲದ ಬಿನೋದ್ ಜೊಮ್ಯೊಟೊ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ.