ಬೆಂಗಳೂರು: ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿ ಪೈಪ್ ಲೇನ್ನಲ್ಲಿ ನಡೆದಿದೆ. ಹನುಮಾನ್ ಹಾಗೂ ಹಂಸ ದಂಪತಿಯ ಎರುಡೂವರೆ ವರ್ಷದ ಗಂಡು ಮಗು ಕಾರ್ತಿಕ್ ಮೃತಪಟ್ಟಿದೆ.
ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹನುಮಾನ್ ಪೈಂಟಿಂಗ್ ಕೆಲಸ ಮಾಡಿಕೊಂಡು ಬ್ಯಾಡರಹಳ್ಳಿಯ ಗೊಲ್ಲರಹಟ್ಟಿ ಬಳಿ ನೆಲೆಸಿದ್ದರು. ಸೋಮವಾರ ಬೆಳಗ್ಗೆ ಕೆಲಸದ ನಿಮಿತ್ತ ಹನುಮಾನ್ ಮನೆಯಿಂದ ಹೊರ ಹೋಗಿದ್ದಾಗ ಪತ್ನಿ ಹಂಸ ಹಾಗೂ ಮಗು ಕಾರ್ತಿಕ್ ಮನೆಯಲ್ಲಿದ್ದರು. ಈ ವೇಳೆ ಆಟವಾಡಲು ಮನೆಯಿಂದ ಹೊರಬಂದ ಮಗು ಬಿಡಬ್ಲ್ಯೂಎಸ್ಎಸ್ ಬಿ ಯ ಕಾಮಗಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಕಾಮಗಾರಿ ಹೆಸರಿನಲ್ಲಿ ಗುಂಡಿ ತೆಗೆದು ತಿಂಗಳು ಕಳೆದರು ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಕನಿಷ್ಠ ಗುಂಡಿ ಸುತ್ತ ತಡೆಗೋಡೆ ನಿರ್ಮಿಸುವ ಗೋಜಿಗೂ ಹೋಗದಿರುವುದು ದುರಂತಕ್ಕೆ ಕಾರಣವಾಗಿದೆ. ಸದ್ಯ ಮಗು ಸಾವಿಗೆ ಕಾರಣರಾದ ಬಿಡಬ್ಲ್ಯೂಎಸ್ಎಸ್ ಬಿ ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬಿಣದ ಪೈಪ್ನೊಳಗೆ ಸಿಲುಕಿದ ಮಗುವಿನ ಕೈ: ಮತ್ತೊಂದೆಡೆ ಕಬ್ಬಿಣದ ಪೈಪ್ನೊಳಗೆ ಮಗುವಿನ ಕೈ ಸಿಲುಕಿಕೊಂಡ ಘಟನೆ ಮುನ್ನಲೆಗೆ ಬಂದಿದೆ. ಕಬ್ಬಿಣದ ಪೈಪ್ನೊಳಗೆ ಒಂದೂವರೆ ವರ್ಷದ ಮಗುವಿನ ಕೈ ಸಿಲುಕಿದ್ದು ಹೊರತೆಗೆಯಲು ಎರಡು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟ ಘಟನೆ ನಿನ್ನೆ ರಾತ್ರಿ ಡೈರಿ ಕಾಲೋನಿಯ ಶಿವನ ದೇವಸ್ಥಾನದ ಆವರಣದ ಬಳಿ ನಡೆದಿದೆ.
ಆಡುಗೋಡಿ ನಿವಾಸಿ ಲೋಕೇಶ್ ದಂಪತಿ ನಿನ್ನೆ ಸಂಜೆ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಮಗುವನ್ನು ದೇವಸ್ಥಾನದ ಆವರಣದಲ್ಲಿ ಆಟವಾಡಲು ಬಿಟ್ಟಿದ್ದಾಗ ಕಂಬ ನೆಡಲು ಅಳವಡಿಸಿದ್ದ ಕಬ್ಬಿಣದ ಪೈಪ್ ನೊಳಗೆ ಮಗು ಕೈ ಇಟ್ಟಿದೆ. ಮಗುವಿನ ಕೈಯಲ್ಲಿ ಬೆಳ್ಳಿ ಕಡಗ ಇದ್ದಿದ್ದರಿಂದ ಪೈಪ್ನೊಳಗೆ ಕೈ ಸಿಲುಕಿಕೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ಹನುಮಂತ್ ಗಮನಿಸಿದ್ದು, ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಮಣ್ಣಿನಲ್ಲಿದ್ದ ಪೈಪ್ ಅಗೆದು ಕತ್ತರಿಸಿ ಬಳಿಕ ಮಗುವಿನ ಕೈ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಆನೇಕಲ್ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಅಂಗಡಿ ಕುಸಿತ; ಓರ್ವನ ಸ್ಥಿತಿ ಗಂಭೀರ