ಬಿಟ್ ಕಾಯಿನ್ ಜಟಾಪಟಿ.. ಸಿಎಂ ಹುದ್ದೆಗೆ ಕುತ್ತು ಎಂಬುದೆಲ್ಲಾ ರಾಜಕೀಯ ಪ್ರೇರಿತ : ಬೊಮ್ಮಾಯಿ - ಬಿಟ್ ಕಾಯಿನ್ ಅವ್ಯವಹಾರ ಪ್ರಕರಣ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ವಶಪಡಿಸಿಕೊಂಡ ಬಿಟ್ ಕಾಯಿನ್ ಕಾಣೆಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲವೂ ದಾಖಲಾತಿಗಳಲ್ಲಿ ಸಾಬೀತಾಗಬೇಕು. ನಿಜವಾದ ಹಗರಣ ಏನು ಎಂಬುದು ಇಲ್ಲಿರುವ ವಿಚಾರ. ನಾವು ಸಿಬಿಐ, ಇಂಟರ್ ಪೋಲ್‌ಗೆ ಕೂಡ ರೆಫರ್ ಮಾಡಿದ್ದು, ಅವರೂ ತನಿಖೆ ಮಾಡುತ್ತಿದ್ದಾರೆ..

ಬೆಂಗಳೂರು : ಬಿಟ್ ಕಾಯಿನ್ ಅವ್ಯವಹಾರ ಪ್ರಕರಣಕ್ಕ ಸಂಬಂಧಿಸಿಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದಕ್ಕೆ ನಾನು ಪ್ರತಿ ನಿತ್ಯ ಪ್ರತಿಕ್ರಿಯೆ ಕೊಡಲು ಇಚ್ಚಿಸುವುದಿಲ್ಲ. ಆರೋಪಗಳಿದ್ದರೆ ದಾಖಲೆಗಳನ್ನು ನೀಡಲಿ. ಪ್ರಕರಣ ಸಿಎಂ ಹುದ್ದೆಗೆ ಕುತ್ತು ಎಂಬುದೆಲ್ಲಾ ರಾಜಕೀಯ ಪ್ರೇರಿತ ಎಂದಿದ್ದಾರೆ.
ವಿಧಾನಸೌಧದಲ್ಲಿ ನ್ಯಾಯಮೂರ್ತಿಗಳ ಸನ್ಮಾನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಹಗರಣಕ್ಕೆ ಸಂಬಂಧಿಸಿದಂತೆ ಯಾರು ಹೇಳುತ್ತಿದ್ದಾರೋ ಅವರಿಗೆ ಹಗರಣ ಏನು, ಯಾರು ಭಾಗಿಯಾಗಿದ್ದಾರೆ ಅಂತಾ ದಯವಿಟ್ಟು ಹೇಳಿ. ಅವರು ಕನಿಷ್ಠ ಮಾಹಿತಿ ನೀಡಿದರೂ ತನಿಖೆಗೆ ಸಹಾಯವಾಗುತ್ತದೆ ಎಂದರು.
ಅಲ್ಲದೇ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಸ್ಪಷ್ಟವಾಗಿದೆ. ಒಂಬತ್ತು ತಿಂಗಳ ಹಿಂದೆಯೇ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ)ಗೆ ಹಸ್ತಾಂತರ ಮಾಡಲಾಗಿದೆ. ಸದ್ಯ ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಜನ 2 ಸಾವಿರ, 8 ಸಾವಿರ ಕೋಟಿ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ, ಆಧಾರ ಏನಿದೆ..? ಇದಕ್ಕೆ ಯಾವುದೇ ಆಧಾರ ಇಲ್ಲ ಎಂದರು.
ಅಲ್ಲದೇ, ನಮ್ಮ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಅಗತ್ಯವಿಲ್ಲ. ಸರ್ಕಾರದ ಯಾವ ವ್ಯಕ್ತಿಗಳು ಭಾಗಿಯಾಗಿಲ್ಲ. ಇಡಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಆರೋಪ ಮಾಡುವವರು ಮಾಹಿತಿ ನೀಡಲಿ, ಅದು ಸಾಬೀತಾಗಲಿ, ಸತ್ಯ ಹೊರಗೆ ಬರಲಿ ಎಂದರು.
ವಶಪಡಿಸಿಕೊಂಡ ಬಿಟ್ ಕಾಯಿನ್ ಕಾಣೆಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲವೂ ದಾಖಲಾತಿಗಳಲ್ಲಿ ಸಾಬೀತಾಗಬೇಕು. ನಿಜವಾದ ಹಗರಣ ಏನು ಎಂಬುದು ಇಲ್ಲಿರುವ ವಿಚಾರ. ನಾವು ಸಿಬಿಐ, ಇಂಟರ್ ಪೋಲ್‌ಗೆ ಕೂಡ ರೆಫರ್ ಮಾಡಿದ್ದು, ಅವರೂ ತನಿಖೆ ಮಾಡುತ್ತಿದ್ದಾರೆ ಎಂದರು.