ಬೆಂಗಳೂರು: ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಮಕ್ಕಳಿಂದ ಹಿಡಿದು ವಯೋವೃದ್ದರೂ ಇಷ್ಟಪಡುವ ಐಸ್ ಕ್ರೀಂ ತಯಾರಿಕೆಯಲ್ಲಿ ವಿವಿಧ ರಾಸಾಯನಿಕಗಳನ್ನು ಬಳಸುವುದು ಗೊತ್ತೇ ಇದೆ. ಇಂತಹ ಐಸ್ ಕ್ರೀಂ ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಗ್ಯಾರಂಟಿ. ಹಾಗಾದರೆ ಆರೋಗ್ಯ ಕಾಪಾಡುವ ಐಸ್ ಕ್ರೀಂ ಸಿಗಲಿದೆಯೇ ಎಂಬ ಪ್ರಶ್ನೆ ಕೇಳಿದರೆ ಸಿರಿಧಾನ್ಯಗಳಿಂದ ಬಳಸಿದ ಐಸ್ ಕ್ರೀಂ ಇದಕ್ಕೆ ಉತ್ತರ.
ಜೋಳ, ನವಣೆ, ಸಜ್ಜೆ ಹಾಗೂ ರಾಗಿ ಬಳಸಿ ಮೊದಲ ಬಾರಿಗೆ ಲಿಕಿ ಕಂಪನಿಯು ಸಿರಿಧಾನ್ಯ ಐಸ್ ಕ್ರೀಂ ತಯಾರಿಸಿದೆ. ಸಿರಿಧಾನ್ಯ, ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಬಂದ ಜನರು ಐಸ್ ಕ್ರೀಂ ಚಪ್ಪರಿಸಿ ಸೇವಿಸುತ್ತಿದ್ದಾರೆ. ಡೈರಿ-ಮುಕ್ತ ಸಿರಿಧಾನ್ಯ ಪೌಷ್ಟಿಕರಿಸಿದ ಐಸ್ ಕ್ರೀಂಗೆ ಸಂಸ್ಕರಿಸಿದ ಸಿರಿಧಾನ್ಯಗಳ ಹಾಲನ್ನು ಬಳಸಲಾಗಿದೆ. ಕೃತಕ ಫ್ಲೇವರ್ ಇಲ್ಲದೆ ನೈಸರ್ಗಿಕವಾಗಿ ತಯಾರಾದ ಐಸ್ ಕ್ರೀಂ ಇದಾಗಿದೆ.
ಸಂಸ್ಕರಿಸಿದ ಸಿರಿಧಾನ್ಯಗಳನ್ನು ದಲ್ಲಾಳಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ಬೆಂಗಳೂರಿನ ಯಲಚೇನಹಳ್ಳಿ ಜೆ.ಸಿ.ಇಂಡಸ್ಟ್ರಿಯಲ್ ಏರಿಯಾದಲ್ಲಿ ಐಸ್ ಕ್ರೀಂ ತಯಾರಿಸಲಾಗುತ್ತದೆ. ಉತ್ಪನ್ನ ಆರಂಭಕ್ಕೂ ಎರಡು ವರ್ಷಗಳ ಸುದೀರ್ಘ ಅಧ್ಯಯನ ನಡೆಸಿ ವಿಜ್ಞಾನಿಗಳ ಜೊತೆ ಚರ್ಚಿಸಿ ಹಲವು ಬಾರಿ ಸಾಧಕ-ಬಾಧಕಗಳೊಂದಿಗೆ ಅಂತಿಮ ಸಿರಿಧಾನ್ಯ ಐಸ್ ಕ್ರೀಂ ಸಿದ್ದಪಡಿಸಲಾಗಿದೆ.
ಈ ಬಗ್ಗೆ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿದ ಕಂಪನಿಯ ಮ್ಯಾನೇಜರ್ ಗೌತಮ್, "ಸಿರಿಧಾನ್ಯಗಳನ್ನು ಬಳಸಿ ಅದರಿಂದ ಬರುವ ಹಾಲಿನಿಂದ ಐಸ್ ಕ್ರೀಂ ತಯಾರಿಸಲಾಗಿದೆ. ನಿಜವಾದ ಹಣ್ಣುಗಳ ಪ್ಲೇವರ್‌ಗಳನ್ನು ಬಳಸಲಾಗಿದೆ. ಸತತ ಅಧ್ಯಯನ ಫಲದಿಂದಾಗಿ ಮಿಲೆಟ್ ಐಸ್ ಕ್ರೀಂ ಸಿದ್ದಪಡಿಸಲಾಗಿದೆ. ಮ್ಯಾಂಗೋ, ಸ್ಟಾಬೇರಿ, ಬಟರ್ ಸ್ಕಾರ್ಚ್, ಚಾಕೋಲೇಟ್, ವೆನಿಲ್ಲಾ ಸೇರಿದಂತೆ ಒಟ್ಟ 9 ರೀತಿಯ ಮಿಲೆಟ್ ಐಸ್ ಕ್ರೀಂ ಮಾರುಕಟ್ಟೆಗೆ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ತರಹೇವಾರಿ ಫ್ಲೆವರ್ವುಳ್ಳ ಐಸ್ ಕ್ರೀಂ ಕಂಪನಿಯಿಂದ ಅಭಿವೃದ್ದಿಪಡಿಸಲಾಗುವುದು".
"ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬರುವ ಸಂಕ್ರಾಂತಿಯಂದು ಜಯನಗರ, ಹೆಚ್‌ಎಸ್‌ಆರ್ ಲೇಔಟ್ನಲ್ಲಿ ಮಳಿಗೆ ತೆರೆಯಲಿದ್ದೇವೆ. ಅನಂತರ ನಗರದ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯುವ ಚಿಂತನೆಯಿದೆ. ಸಿರಿಧಾನ್ಯ ಐಸ್ ಕ್ರೀಂ ಮಾತ್ರವಲ್ಲದೆ ಶಿವಮೊಗ್ಗ, ರಾಯಚೂರಿನಲ್ಲಿ ಸಿರಿಧಾನ್ಯ ಬ್ರೇಡ್, ಕುಕ್ಕಿಸ್ ಬಿಸ್ಕಟ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ" ಎಂದರು.
ಮೇಳಕ್ಕೆ ಆಗಮಿಸಿದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಿರಿಧಾನ್ಯ ಐಸ್ ಕ್ರೀಂ ಸೇವಿಸಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ತರಹೇವಾರಿ 'ತೆಂಗಿನ್' ಉತ್ಪನ್ನಗಳು: ಸಾಫ್ಟ್ವೇರ್ ಕೆಲಸ ಬಿಟ್ಟು ಕೃಷಿಯಲ್ಲಿ ಖುಷಿ ಕಂಡ ಟೆಕ್ಕಿ