ಬೆಂಗಳೂರು: ಹೊಸಕೋಟೆ ನಗರಸಭೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಬರುವ ಮಾರ್ಗವಿದೆ. ಅದನ್ನು ಬಳಸಿಕೊಂಡು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಅವಕಾಶ ಇದೆ. ಅದ್ರೆ ಬರುವ ಆದಾಯ ರಾಜಕೀಯ ಮುಖಂಡರ ಹಿಂಬಾಲಕರ ಹೊಟ್ಟೆ ಸೇರಿ ನಗರಸಭೆ ಆದಾಯಕ್ಕೆ ತಣ್ಣೀರು ಬಟ್ಟೆ ಹಾಕಲಾಗುತ್ತಿದೆ. ಕೊರೊನಾ ಕಾರಣ ಮುಂದಿಟ್ಟುಕೊಂಡು ಅಧಿಕಾರಿಗಳು ತೋರುತ್ತಿರುವ ದಿವ್ಯ ನಿರ್ಲಕ್ಷ್ಯದಿಂದ ನಗರಸಭೆಯಲ್ಲಿ ಲಕ್ಷಾಂತರ ರೂ. ಗೋಲ್ಮಾಲ್ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆಯ ಅಧೀನದಲ್ಲಿ 117ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳು ಇವೆ. ಆದ್ರೆ ಕಟ್ಟಡಗಳು ನಿರ್ಮಾಣವಾದ ನಂತರ ಕೇವಲ ಒಂದು ಬಾರಿ ಮಾತ್ರ ಹರಾಜು ಪ್ರಕ್ರಿಯೆ ಮಾಡಲಾಗಿದೆ. ಕಾನೂನಿನ ಪ್ರಕಾರ 12 ವರ್ಷಕ್ಕೆ ಒಂದು ಬಾರಿ ಹರಾಜು ಪ್ರಕ್ರಿಯೆ ಮಾಡಬೇಕು. ಆದ್ರೆ ಈವರಗೆ ಹರಾಜು ಪ್ರಕ್ರಿಯೆ ನಡೆದಿಲ್ಲ. 117 ವಾಣಿಜ್ಯ ಮಳಿಗೆಗಳಿಂದ ಬರುವ ಬಾಡಿಗೆ ನಗರಸಭೆಗೆ ಸೇರಬೇಕಿದ್ದು, ಒಂದೊಂದು ಮಳಿಗೆಯಿಂದ 2 ಲಕ್ಷಕ್ಕೂ ಅಧಿಕ ಬಾಡಿಗೆ ಬರಲು ಬಾಕಿ ಇದೆ. ಮೊದಲ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಮಳಿಗೆಗಳನ್ನು ಪಡೆದುಕೊಂಡು ಮತ್ತೊಬ್ಬರಿಗೆ ಅಧಿಕ ಬಾಡಿಗೆಗೆ ನೀಡಿ ಸುಲಭವಾಗಿ ಲಾಭ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಒಂದೊಂದು ಮಳಿಗೆಗೆ ಪಾವತಿ ಮಾಡಬೇಕಾಗಿರುವುದು ಕೇವಲ 2ರಿಂದ 3 ಸಾವಿರ ರೂಪಾಯಿ ಮಾತ್ರ. ಅದನ್ನು ಸಹ ಪಾವತಿ ಮಾಡುತ್ತಿಲ್ಲ. ಬದಲಾಗಿ ಅದೇ ಮಳಿಗೆಯನ್ನು ಬೇರೊಬ್ಬರಿಗೆ ಬಾಡಿಗೆಗೆ ನೀಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ಇಷ್ಟು ಬಾಡಿಗೆ ಬಾಕಿ ಉಳಿಸಿಕೊಂಡಿರುವ ನಗರಸಭೆ ಮಾಲೀಕರಿಗೆ ಕೇವಲ ನೋಟಿಸ್ಗಳನ್ನು ನೀಡಲಾಗುತ್ತಿದೆ. ಮಳಿಗೆಗಳ ಬಾಡಿಗೆ ಕೇಳಲು ಹೋದ್ರೆ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾರೆ ಅನ್ನೋ ಮಾತುಗಳು ಸಹ ಕೇಳಿ ಬರುತ್ತಿವೆ.