ಬೆಂಗಳೂರು: ಕನ್ನಡಪರ ಸಂಘಟನೆಗಳನ್ನು ರಾಜಕೀಯಕ್ಕೆ ಆಹ್ವಾನಿಸುವ ಮೂಲಕ ಜೆಡಿಎಸ್ ಹೊಸ ಕಾರ್ಯತಂತ್ರ ಹೆಣೆದಿದೆಯೇ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯು ಸರ್ಕಾರ ನಡೆಸುವುದರಲ್ಲಿ ನಿರತವಾಗಿದ್ದರೆ, ಕಾಂಗ್ರೆಸ್ ಒಳಜಗಳದಲ್ಲೇ ಮುಳುಗಿದೆ. ಜೆಡಿಎಸ್ ಮಾತ್ರ ತೆರೆಮರೆಯಲ್ಲಿ ಮುಂಬರುವ ಚುನಾವಣೆಗೆ ತಂತ್ರ ಹೆಣೆಯುತ್ತಿದೆ.
ನಗರದಲ್ಲಿ ಇತ್ತೀಚೆಗೆ ಕನ್ನಡಪರ ಸಂಘಟನೆ ಮುಖಂಡರ ಜೊತೆ ಸಂವಾದ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕನ್ನಡಪರ ಸಂಘಟನೆಗಳ ನಾಯಕರು ಮುಖ್ಯವಾಹಿನಿಗೆ ಬರಬೇಕು ಎಂಬುದು ನನ್ನ ಅಭಿಲಾಷೆ. ನೀವು ಕೆಲ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ. ಚುನಾವಣೆಗೆ ಇನ್ನೂ 14 ತಿಂಗಳ ಕಾಲಾವಕಾಶವಿದೆ. ಈಗಿನಿಂದಲೇ ಕೆಲಸ ಮಾಡಿ ಎಂದು ಕರೆ ನೀಡಿದ್ದರು.
ನಾವೇಕೆ ವಿರೋಧ ಪಕ್ಷದಲ್ಲಿ ಕೂರಬೇಕು? ನಮಗೆ ನಲವತ್ತು ಸ್ಥಾನಗಳನ್ನು ಗೆಲ್ಲುವುದು ಕಷ್ಟವಲ್ಲ. ನಿಮ್ಮೆಲ್ಲರ ಬೆಂಬಲ ಇದ್ದರೆ 125 ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯವಲ್ಲ ಎಂದು ಹೇಳುವ ಮೂಲಕ ಕನ್ನಡಪರ ಸಂಘಟನೆ ಮುಖಂಡರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವ ಬಗ್ಗೆ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ.
2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದೇ ಹೆಚ್ಡಿಕೆ ಅವರ ಯೋಜನೆಯಾಗಿದೆ. ಹಾಗಾಗಿ, ಹೊಸ ದಾಳವನ್ನು ಹೂಡಿರುವ ಅವರು ಇದರಲ್ಲಿ ಯಶಸ್ಸು ಕಾಣುವರೇ? ಎಂಬುದು ಮುಂದಿರುವ ಪ್ರಶ್ನೆಯಾಗಿದೆ.
ಆಪರೇಷನ್ ಜೆಡಿಎಸ್‍ಗೆ ತೆರೆಮರೆಯಲ್ಲಿ ತಯಾರಿ? : ಜೆಡಿಎಸ್‍ನ ಕೆಲವು ಶಾಸಕರು, ಮಾಜಿ ಶಾಸಕರು, ಮುಖಂಡರು ಪಕ್ಷ ತೊರೆಯಲು ಸಿದ್ಧರಾಗಿರುವುದು ತಿಳಿದ ವಿಚಾರವೇ. ಅವರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿರುವ ಬೆನ್ನಲ್ಲೇ 'ಆಪರೇಷನ್ ಜೆಡಿಎಸ್'ಗೆ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಈಗಾಗಲೇ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದು, ಅವರು ಬಹುತೇಕ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ. ಇಬ್ರಾಹಿಂ ಅವರು ಜೆಡಿಎಸ್‍ಗೆ ಸೇರಿದ ನಂತರ ಆಪರೇಷನ್ ಜೆಡಿಎಸ್‍ಗೆ ಚಾಲನೆ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ಸುಮಾರು 25ಕ್ಕೂ ಹೆಚ್ಚು ನಾಯಕರು ಹಾಗೂ ಮುಖಂಡರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದಾರೆ. ಶಿವರಾತ್ರಿ ಅಥವಾ ಯುಗಾದಿ ಹಬ್ಬದ ನಂತರ ರಾಷ್ಟ್ರೀಯ ಪಕ್ಷಗಳಿಂದ ಕೆಲವು ನಾಯಕರು ಜೆಡಿಎಸ್ ಬಾಗಿಲು ತಟ್ಟಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವರು ಜೆಡಿಎಸ್ನತ್ತ?: ಮುಂಬರುವ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತರಿಯಾಗಿರುವವರು ಜೆಡಿಎಸ್ ಕಡೆ ಮುಖ ಮಾಡಲಿದ್ದಾರೆ. ಅಲ್ಲಿಂದ ಬರುವವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಖಚಿತವಾದರೆ ಜೆಡಿಎಸ್ ಸೇರುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದ್ದು, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಈಗಾಗಲೇ ಪಕ್ಷದ ಹಿರಿಯ ನಾಯಕರೊಂದಿಗೆ ಕುಮಾರಸ್ವಾಮಿ ಸಮಾಲೋಚನೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ವರಿಷ್ಠರಿಂದ ತಯಾರಿ: ಜೆಡಿಎಸ್‍ನ ಮಹತ್ವದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲೇ ಪಕ್ಷಕ್ಕೆ ಬರುವವರನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯವು ಚುರುಕಾಗಲಿದೆ. ಈಗಾಗಲೇ ಅದಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಲಾಗಿದೆ. ಜೆಡಿಎಸ್ ಪಕ್ಷ ತೊರೆದು ಹೋಗುವ ಶಾಸಕರು, ಮಾಜಿ ಸಚಿವರ ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಜೆಡಿಎಸ್‍ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಶೀಘ್ರದಲ್ಲೇ ಪ್ರಕಟಿಸಿ ಈಗಿನಿಂದಲೇ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ವರಿಷ್ಠರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯು ಸರ್ಕಾರ ನಡೆಸುವುದರಲ್ಲಿ ನಿರತವಾಗಿದ್ದರೆ, ಕಾಂಗ್ರೆಸ್ ಒಳ ಜಗಳದಲ್ಲೇ ಮುಳುಗಿದೆ. ಜೆಡಿಎಸ್ ಮಾತ್ರ ತೆರೆಮರೆಯಲ್ಲಿ ಮುಂಬರುವ ಚುನಾವಣೆಗೆ ಕಾರ್ಯತಂತ್ರ ಹೆಣೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಹಾರಾಷ್ಟ್ರದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಲ್ಲ.. ಆದರೆ ಇವೆಲ್ಲ ಬೇಕೇಬೇಕು!