ಬೆಂಗಳೂರು: ಭಾನುವಾರ ಬೆಳಕಿಗೆ ಬಂದ ಬೆಳ್ಳಿ ಅಂಗಡಿ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನೇ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಆರೋಪಿಗಳಿಂದ 8ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಹುಲ್ ಜೈನ್ ಮುಖ್ಯ ಆರೋಪಿಯಾಗಿದ್ದು, ಇನ್ನಿಬ್ಬರಾದ ರಾಜೇಶ್ ಹಾಗೂ ಮಧು ಎಂಬುವರನ್ನು ಬಂಧಿಸಲಾಗಿದೆ.
ಭಾನುವಾರ ಅಂಗಡಿ ಮಾಲೀಕ ಬಂದು ಅಂಗಡಿ ನೋಡಿದಾಗ ಶಾಕ್ ಕಾದಿತ್ತು. ಸಿಸಿ ಕ್ಯಾಮೆರಾಗಳ ದಿಕ್ಕು ಬದಲಿಸಿ, ಅಂಗಡಿಯ ಬೀಗ ಒಡೆದು ಹಾಕಲಾಗಿತ್ತು. ಕೂಡಲೇ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಬೆನ್ನು ಹತ್ತಿದ ಪೊಲೀಸರಿಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ರಾಹುಲ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಗೊತ್ತಾಗಿತ್ತು.
ಬಂಧಿತ ಆರೋಪಿ ರಾಹುಲ್ ಜೈನ್ ಅಂಗಡಿ ಮಾಲೀಕ ಉತ್ತಮ್ ಜೈನ್ನ ನಂಬಿಕಸ್ತ ಕೆಲಸಗಾರ. ರಾಹುಲ್ ಕಳೆದ ಮೂರು ವರ್ಷಗಳಿಂದ ಇದೇ ಅಂಗಡಿಯಲ್ಲಿ ಮಾರ್ಕೆಟಿಂಗ್ ಏಜೆಂಟ್ ಆಗಿ ಕೆಲಸ ಮಾಡ್ಕೊಂಡಿದ್ದ. ಇಲ್ಲಿ ಕೆಲಸದ ಜೊತೆಗೆ ಬಟ್ಟೆ ಅಂಗಡಿ ನಡೆಸುತ್ತಿದ್ದ. ಅಂಗಡಿ ನಷ್ಟವಾದ ಕಾರಣ ಅದನ್ನು ಮುಚ್ಚಿ ಶಿಫ್ಟ್ ಮಾಡಲೆಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗರನ್ನು ಕರೆದುಕೊಂಡು ಬಂದು ಬೆಳ್ಳಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ.
ಅಂಗಡಿಯ ಸಿಸಿ ಕ್ಯಾಮೆರಾದ ಬಗ್ಗೆ ಗೊತ್ತಿದ್ದ ರಾಹುಲ್ ಮುಖಕ್ಕೆ ಮಾಸ್ಕ್ ಮತ್ತು ಹೆಲ್ಮೆಟ್ ಹಾಕಿಕೊಂಡು ಬಂದು ಕ್ಯಾಮೆರಾಗಳ ದಿಕ್ಕು ಬದಲಿಸಿ ಕಳ್ಳತನ ಮಾಡಿದ್ದಾನೆ. ಕಳ್ಳತನದ ವಿಚಾರ ಗೊತ್ತಾಗಿ ನಾಲ್ಕು ಗಂಟೆಯೊಳಗೆ ಚಾಮರಾಜಪೇಟೆ ಠಾಣೆ ಎಸ್ಪಿ ಎರ್ರಿಸ್ವಾಮಿ ಮತ್ತು ತಂಡ ಆರೋಪಿಗಳ ಹೆಡೆಮುರಿ ಕಟ್ಟಿದೆ.
ಇದನ್ನೂ ಓದಿ: ATMಗೆ ಹಾಕಲು ನೀಡಿದ್ದ 56 ಲಕ್ಷ ಹಣದೊಂದಿಗೆ ಪರಾರಿಯಾದ ವ್ಯಕ್ತಿಯ ಬಂಧನ