ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತವಾಗಿ ಶೇ.40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಸೋಮವಾರ ದೂರು ನೀಡಿದೆ. ಈ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಶೇ.40 ರಷ್ಟು ಕಮೀಷನ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಅವರ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ನಮ್ಮ ದೂರಿಗೆ ಪುರಾವೆ ಇದೆ. ಅವರ ಆಪಾದನೆಗೆ ಆಧಾರವಿಲ್ಲ. ಬಿಜೆಪಿ ಸರ್ಕಾರ ವಿರುದ್ಧ ದಾಖಲೆಯಿಲ್ಲದೆ ಅಪಪ್ರಚಾರ ಮಾಡಿದ್ದಾರೆ. ಇವತ್ತಿಗೂ ದಾಖಲೆ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು. ಬಿಜೆಪಿಯಿಂದ ನೀಡಿರುವ ದೂರನ್ನು ಲೋಕಾಯುಕ್ತರು ಅಂಗೀಕರಿಸಿದ್ದಾರೆ. ಏನಾದರೂ ಹೆಚ್ಚಿನ ದಾಖಲೆ ಬೇಕಿದ್ದರೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಪಡೆಕೊಳ್ಳುವುದಾಗಿ ತಿಳಿಸಿದ್ದಾರೆ. ದಾಖಲೆ ಸಾಕಿದ್ದರೆ ನೇರವಾಗಿ ಸಿದ್ದರಾಮಯ್ಯರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ದೂರಿನ ಜೊತೆಗೆ 2013-14ರಲ್ಲಿ ನಡೆದ ಟೆಂಡರ್ ಶೂರ್ ಸಂಬಂಧಿಸಿದ ಹಲವು ಕಾಮಗಾರಿಗಳಲ್ಲಿ ಟೆಂಡರ್ ಇಟ್ಟಿದ್ದ ಹಣಕ್ಕಿಂತ 53.86 ಶೇಕಡ ಹೆಚ್ಚುವರಿ ಹಣ ಬಿಡುಗಡೆ ಮಾಡಿದ 10 ರಿಂದ 12 ದಾಖಲೆಗಳನ್ನು ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ಅಂಥದ್ದು ನಡೆದಿಲ್ಲ. ಇವತ್ತಿನವರೆಗೆ ಕಾಂಗ್ರೆಸ್ಸಿನವರು ತಮ್ಮ ಆಪಾದನೆಗೆ ಯಾವುದೇ ದಾಖಲೆ ನೀಡಿಲ್ಲ. ಬೀದಿಯಲ್ಲಿ ಅವರು ಆರೋಪಿಸುತ್ತಾರೆ. ಇದೇ ಕಾರಣಕ್ಕೆ ಒಂದೇ ಒಂದು ದೂರು ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದರು.
ಸಿದ್ದರಾಮಯ್ಯ ಆಪಾದನೆಯನ್ನು ಸಾಬೀತುಪಡಿಸಲಿ: ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಲ್ಲಿ ನಿಜವಾಗಿಯೂ ತಾಕತ್ತಿದ್ದರೆ ತಮ್ಮ ಆಪಾದನೆಯನ್ನು ಸಾಬೀತುಪಡಿಸಲು ಸಾಕ್ಷ್ಯ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕುವುದಾಗಿ ತಿಳಿಸಿದರು. ದಾಖಲೆ ಕೊಡದಿದ್ದರೆ ನಿಮ್ಮ ಮುಖಕ್ಕೆ ಜನರೇ ಮಂಗಳಾರತಿ ಮಾಡುತ್ತಾರೆ. ಬೀದಿಯಲ್ಲಿ ಆಪಾದನೆ ಮಾಡುವುದಲ್ಲ. ತಾಕತ್ತಿದ್ದರೆ ಲೋಕಾಯುಕ್ತಕ್ಕೆ ಬನ್ನಿ ಎಂದು ತಿಳಿಸಿದರು. ಸಿದ್ದರಾಮಯ್ಯರ ವಿರುದ್ಧ 65 ಕೇಸುಗಳಿದ್ದವು. ಲೋಕಾಯುಕ್ತವನ್ನೇ ಮುಚ್ಚಿಬಿಟ್ಟರು. 10 ಕೇಸುಗಳನ್ನು ಎಸಿಬಿಗೆ ಕೊಟ್ಟು ಖುಲಾಸೆ ಮಾಡಿಸಿಕೊಂಡರು. ಇನ್ನೂ 50 ಕೇಸುಗಳಿವೆ. ಅವುಗಳ ತನಿಖೆ ಮಾಡಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು. ಅಲಿಬಾಬಾ ಮತ್ತು 40 ಕಳ್ಳರ ಮಾದರಿಯಲ್ಲಿ ಸಿದ್ದರಾಮಯ್ಯರ ಸರ್ಕಾರವಿ ಸಿದ್ದರಾಮಯ್ಯ ಮತ್ತು 40 ಕಳ್ಳರ ಸರ್ಕಾರವಾಗಿತ್ತು. ಅಂಥವರು ಇದೀಗ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಟೀಕಿಸಿದರು.
ಸಿದ್ದರಾಮಯ್ಯ ಹರಿಶ್ಚಂದ್ರ ಅಲ್ಲ: ಸಿದ್ದರಾಮಯ್ಯರಿಗೆ ನೋಟಿಸ್ ಕೊಟ್ಟು, ಅವರ ಕರ್ಮಕಾಂಡವೆಲ್ಲವನ್ನೂ ಬಯಲಿಗೆ ತರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯ ಹರಿಶ್ಚಂದ್ರರೇನೂ ಅಲ್ಲ. ಅವರ ಕಾಲದಲ್ಲಿ ಮಾಡಿರುವುದು ಬಹಳಷ್ಟಿದೆ. ಆದರೆ, ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಅವರು ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು? ಕರ್ನಾಟಕದಲ್ಲಿ 120ರಷ್ಟಿದ್ದ ಸ್ಥಾನ 80ಕ್ಕೆ ಯಾಕೆ ಬಂತು? ಎಂದು ಕೇಳಿದ ಅವರು, ಅವರು ಮಾಡಿದ ಕರ್ಮಕಾಂಡಗಳನ್ನು ಸಹಿಸಲಾರದೆ ಜನರು ಮನೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
5 ವರ್ಷದಲ್ಲಿ ಜನರು ಎಲ್ಲ ಮರೆತಿದ್ದಾರೆ ಎಂದು ಭಾವಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಇದ್ದರೆ ಬಂದು ಇದನ್ನು ಎದುರಿಸಲಿ. ನೇರವಾಗಿ ದಾಖಲೆಗಳನ್ನು ಕೋರ್ಟಿಗಾದರೂ ನೀಡಲಿ ಎಂದು ಸವಾಲು ಹಾಕಿದರು. ಇದಲ್ಲದೆ ಇನ್ನೂ ಹಲವಾರು ಕೇಸುಗಳಿವೆ. ಎಲ್ಲದರಲ್ಲೂ ಶೇ 25-30ರಷ್ಟು ಹೆಚ್ಚುವರಿ ಹಣ ಕೊಟ್ಟು ಇವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪ ಮಾಡಿದರು. ಅವರು ನಮ್ಮ ಮೇಲೆ ಬೆಂಗಳೂರು ನಗರದ ವಿಚಾರವಾಗಿ ಆರೋಪಿಸಿದ್ದಾರೆ. ನಾವು ಹೊರಗಡೆ ನಡೆದ ಕಾಂಗ್ರೆಸ್ ಭ್ರಷ್ಟಾಚಾರದ ಮಾಹಿತಿಯನ್ನೂ ಲೋಕಾಯುಕ್ತಕ್ಕೆ ಕೊಡಲಿದ್ದೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯನವರು ಮನೆಗೆ ಹೋಗುವುದು ನಿಶ್ಚಿತ: ಬಿ ಎಸ್ ಯಡಿಯೂರಪ್ಪ