ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಪರಾಮರ್ಶೆ ನಡೆಸಲು ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ ಆಗಮಿಸಿದ್ದು, ನಾಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್ ಗಂಠ ನೇತೃತ್ವದ 6 ಅಧಿಕಾರಿಗಳ ತಂಡ ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಈ ಬಗ್ಗೆ ಸಭೆ ನಡೆಸಿದರು. ಈ ವೇಳೆ ಸಿಎಂ ಬಿಎಸ್ವೈ ನೆರೆಹಾನಿ ಕುರಿತು ವಿವರ ನೀಡಿದರು. ಅಧಿಕಾರಿಗಳು ಸಂಬಂಧ ಪಟ್ಟ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪಡೆದಿರುವ ಕೇಂದ್ರ ಅಧ್ಯಯನ ತಂಡ ನಾಳೆ ಮೂರು ತಂಡಗಳಾಗಿ ಪ್ರವಾಸ ನಡೆಸಿ ಅಧ್ಯಯನ ನಡೆಸಲಿದೆ.
ಓದಿ: ಸಾರಿಗೆ ಸಿಬ್ಬಂದಿಯೊಂದಿಗಿನ ಸಂಧಾನ ಸಭೆ ಸಫಲ: ನಾಳೆಯಿಂದಲೇ ಬಸ್ ಸಂಚಾರ ಆರಂಭ
ಮೂರು ತಂಡಗಳಾಗಿ ಕಲ್ಬುರ್ಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಹಾನಿ ಪರಿಶೀಲನೆ ನಡೆಸಲಿದ್ದು, ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಯ ಡಿಸಿಗಳ ಜೊತೆ ಸಭೆ ನಡೆಸಲಿದೆ.
ಕಲ್ಬುರ್ಗಿ ಜಿಲ್ಲೆಯ ಕಪನೂರ್, ಸಿರನೂರ್, ಹಾಗರಗುಂಡಗಿ, ಜೇವರ್ಗಿ, ಫಿರೋಜಾಬಾದ್, ಕೊಹ್ನಿಪ್ಪರ್ಗ ಬ್ರಿಡ್ಜ್, ಕೋಡಿ ದರ್ಗ ಪ್ರದೇಶಗಳು ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ, ತಾರಾಪುರ್, ಅಗರಖೇಡ, ಗುಬ್ಬೇವಾಡ ಪ್ರದೇಶಗಳು ಹಾಗು ಉಡುಪಿ ಜಿಲ್ಲೆಯ ಶಿವಳ್ಳಿ, ಕಕ್ಕುಂಜೆ, ನಾಡೂರು, ಜನ್ನಾಡಿ, ತೆಕ್ಕಟ್ಟೆ ಪ್ರದೇಶಗಳಲ್ಲಿ ಈ ತಂಡ ಪರಿಶೀಲನೆ ನಡೆಸಲಿದೆ.
ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಜೊತೆ ಸಭೆ ನಡೆಸಲಿರುವ ಕೇಂದ್ರ ಅಧ್ಯಯನ ತಂಡ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.