ಬೆಂಗಳೂರು: ಎನ್ಆರ್ಸಿ ಮತ್ತು ಸಿಎಎ ಮುಸಲ್ಮಾನರ ವಿರುದ್ಧದ ಕಾಯ್ದೆಯಲ್ಲ. ಕಾಂಗ್ರೆಸ್ ಸೇರಿ ಕೆಲ ಪ್ರತಿಪಕ್ಷಗಳು ಈ ಸಂಬಂಧ ತಪ್ಪು ಮಾಹಿತಿ ನೀಡಿ ಮುಸಲ್ಮಾನ ಯುವಕರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆರೋಪಿಸಿದರು.
ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಕೇಂದ್ರ ಸರ್ಕಾರ ನಿಮ್ಮ ಪರವಾಗಿಯೇ ಇದೆ. ಶಾಂತಿ ಕಾಪಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಜಾಮಿಯಾ ವಿವಿ ಗಲಾಟೆ ನಂತರ ಮುಸಲ್ಮಾನರ ಆಕ್ರೋಶ ದೇಶವ್ಯಾಪ್ತಿ ವಿಸ್ತರಣೆಯಾಗಿದೆ. ಆದರೆ ಈ ಕಾಯ್ದೆಯಿಂದ ಭಾರತೀಯ ಮುಸಲ್ಮಾರಿಗೆ ಯಾವುದೇ ತೊಂದರೆಯಾಗಲ್ಲ. ಸ್ವಾತಂತ್ರ್ಯ ಪೂರ್ವದಿಂದ ಇರುವ ಮುಸಲ್ಮಾನರು ನಿಜವಾದ ಭಾರತೀಯರೇ ಆಗಿದ್ದಾರೆ. ಅವರಿಗೆ ಇಲ್ಲಿ ಯಾವುದೇ ತೊಂದರೆ ಆಗಲ್ಲ. ಅಫ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದಿಂದ 2014ರ ಮೊದಲ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆಯಿಲ್ಲ. ಪ್ರಧಾನಿ ಮೋದಿ ಇದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆಯುಷ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಜಾರಿಗೆ ತಂದಿದೆ. ಅದರಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಎಲ್ಲರಿಗೂ ಸೌಲಭ್ಯ ಕಲ್ಪಿಸಿದೆ. ಮುಸಲ್ಮಾನರ ಪರ ಕೇಂದ್ರ ಸರ್ಕಾರ ಇದೆ. ಆದರೆ ಕಾಂಗ್ರೆಸ್ ನಾಯಕರು, ಮಮತಾ ಬ್ಯಾನರ್ಜಿ, ಸಮಾಜವಾದಿ ಪಾರ್ಟಿ ಮುಂತಾದ ನಾಯಕರು ಈ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮೋದಿ ಪಿಎಂ ಆಗಿದ್ದನ್ನು ಸಹಿಸಲು ಆಗದೇ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಮುಸಲ್ಮಾನರು ಆತಂಕ ಪಡುವ ಅಗತ್ಯವಿಲ್ಲ. ನಾವು ನಿಮ್ಮ ಪರ ಇದ್ದೇವೆ. ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.
ತ್ರಿವಳಿ ತಲಾಖ್, 370 ಆರ್ಟಿಕಲ್ ರದ್ದು ಮಾಡಿದ್ದೇವೆ. ಅಯೋಧ್ಯೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಮುಸ್ಲಿಂ ಸಮುದಾಯದವರು ಸ್ವಾಗತ ಮಾಡಿದ್ದಾರೆ. ಆದರೆ ಈಗ ಮಾತ್ರ ಗಲಭೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರ ಅಗತ್ಯ ತಿಳುವಳಿಕೆ ನೀಡುತ್ತಿದೆ. ಎನ್ಆರ್ಸಿ ಮತ್ತು ಸಿಎಎಯಿಂದ ಯಾವುದೇ ತೊಂದರೆ ಇಲ್ಲ. ಎನ್ಡಿಎ ಭಾಗವಾದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಇದಕ್ಕೆ ಪೂರ್ಣ ಬೆಂಬಲ ನೀಡಿದೆ ಎಂದರು.
ಗಲಭೆ ತನಿಖೆ:
ಜಾಮಿಯಾ ಯುನಿವರ್ಸಿಟಿಯಲ್ಲಿ ಪೊಲೀಸ್ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಗಲಭೆ ಬಗ್ಗೆ ತನಿಖೆ ಮಾಡಲಾಗುವುದು. ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಗೋಲಿಬಾರ್ ಮಾಡಿರಬಹುದು. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ತನಿಖೆಯಲ್ಲಿ ಎಲ್ಲ ಬಹಿರಂಗಗೊಳ್ಳಲಿದೆ ಎಂದರು.