ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಕಾಟಾಚಾರಕ್ಕೆ ನೆರೆ ಅಧ್ಯಯನ ಸಮಿತಿ ಕಳಿಸಿಕೊಟ್ಟಿದೆ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆ ಸ್ಟಡಿ ಟೀಂ ಏನ್ ಮಾಡ್ತಿದೆ ಗೊತ್ತಿದೆ. ಪೂರ್ಣ ಪ್ರಮಾಣದ ಅಧ್ಯಯನವನ್ನ ಕೇಂದ್ರ ತಂಡ ಮಾಡುತ್ತಿಲ್ಲ. ₹1029 ಕೋಟಿ ಬರದ ನೆರವು ಕೇಂದ್ರ ನೀಡಿದೆ. ಆದರೆ ಪ್ರವಾಹದ ನೆರವು ಬಿಡಿಗಾಸೂ ಬಂದಿಲ್ಲ. ಖಾತೆ ಕಿತ್ತಾಟದಲ್ಲೇ ಸರ್ಕಾರ ಸಂಪೂರ್ಣ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
ಅತಂತ್ರ ಸ್ಥಿತಿ:
ಬಿಜೆಪಿಯವರು ಇಂದು ರಾಜ್ಯದ 17 ಶಾಸಕರನ್ನು ಅತಂತ್ರ ಸ್ಥಿತಿ ತಂದಿಟ್ಟಿದ್ದಾರೆ. ಅವರ ಬದುಕನ್ನು ನರಕ ಮಾಡಿ ಶಕುನಿ ಮಾಮನ ಕಾರ್ಯ ಮಾಡಿದ್ದಾರೆ. ಅತೃಪ್ತ ಶಾಸಕರ ಬದುಕನ್ನು ಅತಂತ್ರವಾಗಿಸಿದ್ದಾರೆ. ಅವರಿಗೆ ಭವಿಷ್ಯ ಇಲ್ಲದಂತೆ ಮಾಡಿದ್ದಾರೆ. ವಾಮಮಾರ್ಗದಿಂದ ಅಧಿಕಾರಕ್ಕೆ ಬಂದು ಇದೀಗ ನಂತರದ ಕಾರ್ಯನಿರ್ವಹಣೆಗೆ ಏನೆಲ್ಲಾ ಕೆಲಸ ಮಾಡುತ್ತಿದ್ದೀರಿ. ಸರ್ಕಾರ ಉಳಿಸಿಕೊಳ್ಳಲು ಸಂವಿಧಾನದಲ್ಲಿ ಇಲ್ಲದ ನಿಯಮ ಜಾರಿಗೆ ತರುತ್ತಿದ್ದೀರಿ. ಅನಗತ್ಯವಾಗಿ ಕೇಂದ್ರದ ಬಲ ಬಳಸುತ್ತಿದ್ದೀರಿ. ಸಂವಿಧಾನಬಾಹಿರ, ಜನಾದೇಶಕ್ಕೆ ವಿರುದ್ಧವಾದ ಸರ್ಕಾರ ಇಂದು ರಾಜ್ಯದಲ್ಲಿದೆ ಎಂದರು.
ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ:
ರಾಜ್ಯದಲ್ಲಿ ಪ್ರವಾಹ, ಬರದ ಸ್ಥಿತಿ ಇದೆ. ಜನರ ಬದುಕು ದುಸ್ತರವಾಗಿದೆ. ಕೇಂದ್ರದ ಮೇಲೆ ಒತ್ತಡ ತಂದು ನಯಾಪೈಸೆ ವಿಶೇಷ ಅನುದಾನ ತಂದಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೆ ಬದ್ಧತೆ ಇಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ₹5 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಳಿದ್ದೆವು. ಪ್ರಧಾನಿ ವೈಮಾನಿಕ ಸಮೀಕ್ಷೆ ನಡೆಸಲಿ ಎಂದು ಕೋರಿದ್ದೆವು. ಆದರೆ ಸರ್ಕಾರ ರಚನೆ, ಮಂತ್ರಿ ಮಂಡಳ ವಿಸ್ತರಣೆ, ಖಾತೆ ಹಂಚಿಕೆ ವಿಚಾರದಲ್ಲಿ ಗಮನ ಹರಿಸಿದ್ದಾರೆ. ಕೇಂದ್ರ ಸಚಿವರು ಬಂದು ವಾಪಸ್ ತೆರಳಿದ್ದಾರೆ. ಏನೂ ಪರಿಹಾರ ಬಿಡುಗಡೆ ಮಾಡಿಸಿಲ್ಲ ಎಂದರು.
ಈಗ ಕೇಂದ್ರದ ಅಧ್ಯಯನ ತಂಡ ಆಗಮಿಸಿದೆ. ಅವರು ನಡೆಸಿದ ಸಮೀಕ್ಷೆಯ ವಿವರ ಗಮನಕ್ಕೆ ಬಂದಿದೆ. ಇವರಿಂದ ಪರಿಹಾರ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇವರಿಂದ ಹಣ ಬಿಡುಗಡೆ ಆಗಲ್ಲ. ದಯವಿಟ್ಟು ಗಂಭೀರವಾಗಿ ಸರ್ಕಾರ ಪರಿಹಾರ ಕೊಡಿಸುವ, ಜನರ ಸಮಸ್ಯೆಗೆ ಸ್ಪಂಧಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಸಂತೋಷ್ ಆರೋಪ ಸಲ್ಲ:
ನೆಹರು ಕುಟುಂಬದ ಬಗ್ಗೆ ಸಂತೋಷ್ ಆರೋಪ ವಿಚಾರ ಮಾತನಾಡಿ, ಬಿ.ಎಲ್.ಸಂತೋಷ್ ಅವರು ನೆಹರು ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ದೇಶಕ್ಕೆ ನೆಹರು ಕೊಡುಗೆ ಬಗ್ಗೆ ನಿಮಗೆ ತಿಳಿದಿಲ್ಲ. ಅವರ ಕೊಡುಗೆ ಬಗ್ಗೆ ದೇಶಕ್ಕೇ ಗೊತ್ತಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವವರಿಗೆ ಎಲ್ಲಿ ಗೊತ್ತಾಗುತ್ತದೆ ಎಂದರು.