ಬೆಂಗಳೂರು: ಕೇಂದ್ರ ಸರ್ಕಾರದಿಂದ ನೋಟರಿ ವಕೀಲರನ್ನು ನೇಮಕ ಮಾಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 25,000 ಹಣ ಪಡೆದ ಆರೋಪದಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರದ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ.ಮಲೀಕ್ ಹಾಗೂ ವಕೀಲೆ ಜಿ.ಕೆ.ವಾಣಿ ಎಂಬವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ. ಈ ಕುರಿತು ಸಿಬಿಐ ಮೂಲಗಳು ಮಾಹಿತಿ ನೀಡಿವೆ.
ನೋಟರಿ ನೇಮಕ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವು ಕಾನೂನು ವ್ಯವಹಾರ ವಿಭಾಗಕ್ಕೆ ನೀಡಿದೆ. ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುವ ಮಲಿಕ್ ಅಧಿಕಾರ ದುರುಪಯೋಗಪಡಿಸಿಕೊಂಡು ಲಂಚ ಪಡೆದು ನೋಟರಿ ಅಧಿಕಾರ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಹಕರಿಸುತ್ತಿದ್ದರು ಎನ್ನಲಾದ ವಕೀಲೆ ಜಿ.ಕೆ.ವಾಣಿ ಎಂಬವರನ್ನೂ ಸಹ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಸಿಬಿಐ ಮಲೀಕ್ರನ್ನು ಬಂಧಿಸಿ, 4.32 ಲಕ್ಷ ರೂ ವಶಕ್ಕೆ ಪಡೆದಿದ್ದಾರೆ. ಗಾಜಿಯಾದಾಬ್‌ನಲ್ಲಿರುವ ಆರೋಪಿಗೆ ಸೇರಿದ್ದ ಎರಡು ಸ್ಥಳಗಳ ಮೇಲೂ ದಾಳಿ ಮಾಡಲಾಗಿದ್ದು, 34 ಲಕ್ಷ ರೂ ಜಪ್ತಿ ಮಾಡಲಾಗಿದೆ. ಆರೋಪಿ ನೀಡಿದ ಮಾಹಿತಿಯಂತೆ ಬೆಂಗಳೂರಿನಲ್ಲಿ ವಕೀಲೆ ವಾಣಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ದೇಶದ ವಿರುದ್ಧ ಬೇಹುಗಾರಿಕೆ ಆರೋಪ: ಫ್ರೀಲಾನ್ಸ್ ಪತ್ರಕರ್ತನ ವಿರುದ್ಧ ಸಿಬಿಐ ಕೇಸ್
ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್: ಕರ್ನಾಟಕದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿ ಆಯ್ಕೆಯಾಗಿರುವ ವಿಚಾರ ಗೊತ್ತಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ. ಹಾಲಿ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿ ಮೇ 25ರಂದು ಕೊನೆಗೊಳ್ಳಲಿದೆ. ಹೀಗಾಗಿ, ಕೆಲ ದಿನಗಳ ಹಿಂದೆ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಹೊಸ ನಿರ್ದೇಶಕರ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಂತಿಮಗೊಳಿಸಿತ್ತು.
ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್, ಮಧ್ಯಪ್ರದೇಶದ ಡಿಜಿಪಿ ಸುಧೀರ್ ಸಕ್ಸೇನಾ ಮತ್ತು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮಹಾನಿರ್ದೇಶಕ ತಾಜ್ ಹಾಸನ್ ಅವರ ಹೆಸರು ಸಿಬಿಐ ನಿರ್ದೇಶರ ಹುದ್ದೆಗೆ ಮುಂಚೂಣಿಯಲ್ಲಿತ್ತು. ಅಂತಿಮವಾಗಿ, ಕರ್ನಾಟಕ ಕೇಡರ್‌ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ನೇಮಕಗೊಂಡರು.
ಸಿಬಿಐನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕರ್ನಾಟಕ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಟ್ವಿಟ್ ಮಾಡಿ, ತಮ್ಮ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದರು. ಒಟ್ಟು ಮೂರು ಟ್ವೀಟ್ಗಳ ಮೂಲಕ ಮಾಹಿತಿ ನೀಡಿರುವ ಸೂದ್, ಅಧಿಕಾರವನ್ನು ಶೀಘ್ರದಲ್ಲಿಯೇ ಹಸ್ತಾಂತರ ಮಾಡುತ್ತೇನೆ. ಕರ್ನಾಟಕ ಡಿಜಿ, ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಣೆಯಿಂದ ಹೊರಬರುತ್ತಿದ್ದೇನೆ. ಇವು ಕರ್ನಾಟಕ ಡಿಜಿ ಆ್ಯಂಡ್ ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದು ಕೊನೆಯ ಟ್ವೀಟ್ ಆಗಿವೆ ಎಂದು ಬರೆದುಕೊಂಡಿದ್ದರು.