ಬೆಂಗಳೂರು: ಕೇಂದ್ರದ ಯೋಜನೆಗಳಿಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಪಶು ಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಮನವಿ ಮಾಡಿದ್ದು, ಸದ್ಯದಲ್ಲೆ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಓದಿ: ನೋಟಿಸ್ ನನ್ನ ಕೈ ಸೇರಿಲ್ಲ, ನಾನು ಯಾವುದಕ್ಕೂ ಅಂಜುವುದಿಲ್ಲ; ಯತ್ನಾಳ್ ಗುಡುಗು
ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಪಶುಸಂಗೋಪನೆ ಸಚಿವ ಗಿರಿರಾಜ್ ಸಿಂಗ್ ಹಾಗೂ ಕೇಂದ್ರದ ರಾಜ್ಯ ಖಾತೆ ಸಚಿವ ಸಂಜೀವಕುಮಾರ್ ಬಲ್ಯಾನ್ ಅವರೊಂದಿಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸಭೆ ನಡೆಸಿದರು. ಕರ್ನಾಟಕದಲ್ಲಿ ಇಲಾಖೆ ಜಾರಿಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಪಶುಸಂಜೀವಿನಿ ಬಗ್ಗೆಯೂ ವಿವರಣೆ ನೀಡಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರೈತಪರ ಯೋಜನೆ ರೂಪಿಸಿದ್ದು, ಜಾನುವಾರುಗಳ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವುದನ್ನು ಶ್ಲಾಘಿಸಿದ್ದಾರೆ ಎಂದು ಚವ್ಹಾಣ ಮಾಹಿತಿ ನೀಡಿದ್ದಾರೆ.
ಸದ್ಯ ಪಶುಗಳಿಗಿರುವ ವಿಮಾ ಸೌಲಭ್ಯ ಮಿತಿಯನ್ನು 14 ಸಾವಿರದಿಂದ 2 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಸದ್ಯ ಇರುವ ವಿಮಾ ಸೌಲಭ್ಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮದ ಅಡಿ ಹೆಣ್ಣು ಕರುಗಳ ಜನನಕ್ಕೆ ಹೆಚ್ಚು ಒತ್ತು ನೀಡಲು ಕೇಂದ್ರ ಪಶುಸಂಗೋಪನೆ ಸಚಿವರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಅಂದಾಜು 500 ಹಳ್ಳಿಗಳನ್ನು ಆಯ್ದುಕೊಂಡು ಉಚಿತವಾಗಿ ನಳಿಕೆಗಳನ್ನು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯು ಮಿಶ್ರತಳಿಯಲ್ಲಿ ಹೆಣ್ಣು ಕರುಗಳ ಜನನಕ್ಕೆ ಹೆಚ್ಚು ಒತ್ತು ನೀಡಲಿದೆ.
ರಾಜ್ಯದಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ 2 ಲಕ್ಷ ಹೆಣ್ಣು ಕರುಗಳ ಜನನದ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ರೈತರಿಗೆ ಈ ಯೋಜನೆಗಳು ಹೆಚ್ಚು ಅನುಕೂಲವಾಗಲಿವೆ ಎಂದು ಸಚಿವ ಪ್ರಭು ಚವ್ಹಾಣ ಅಭಿಪ್ರಾಯ ಪಟ್ಟಿದ್ದಾರೆ.
ಕುರಿ ಮತ್ತು ಮೇಕೆ ಸಾಕಣೆಗೆ ಹೆಚ್ಚು ಒತ್ತು ನೀಡಲು ಕಡಿಮೆ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲ ಒದಗಿಸಿ ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂಬರುವ ವರ್ಷದಲ್ಲಿ ಯೋಜನೆಗಳನ್ನು ರೂಪಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಮೇವು ಉತ್ಪಾದನೆಗೆ ಸಂಬಂದಿಸಿದಂತೆ ಪಿಪಿಪಿ ಮಾದರಿಯಲ್ಲಿ ರಸಮೇವಿನ ಉತ್ಪಾದನೆಗೆ ಗಮನ ಹರಿಸಲು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಪಶುಸಂಗೋಪನೆ ಇಲಾಖೆಯ ಫಾರ್ಮ್ ಗಳನ್ನು ಮೇವು ಉತ್ಪಾದನಾ ಉದ್ದೇಶಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲು ತಿಳಿಸಿದ್ದಾರೆ ಎಂದರು.
ಕೇಂದ್ರ ಸಚಿವರೊಂದಿಗಿನ ಸಭೆ ಫಲಪ್ರದವಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಇದೇ ವೇಳೆ, ಕರ್ನಾಟದಲ್ಲೂ ಗೋಹತ್ಯೆ ನಿಷೇಧ ಜಾರಿಯಾಗಿದಕ್ಕೆ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.