ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಗೊರಗೊಂಟೆ ಪಾಳ್ಯ ಫ್ಲೈ ಓವರ್ ದುರಸ್ತಿ ಕಾರ್ಯವನ್ನು ಕೇಂದ್ರದಿಂದಲೇ ಮಾಡಲಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ನಿನ್ನೆಯಷ್ಟೇ ಒಂದು ಸುತ್ತಿನ ಸಭೆ ನಡೆಸಿದ್ದ ಸಿಎಂ, ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ರಾಜ್ಯದ ಹೆದ್ದಾರಿ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.
ಗಡ್ಕರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇವತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ಲೋಕೋಪಯೋಗಿ, ಬಿಬಿಎಂಪಿ, ಹಣಕಾಸು ಇಲಾಖೆ ಅಧಿಕಾರಿಗಳು ಚರ್ಚೆ ಮಾಡಿದ್ದೇವೆ. ಇಡೀ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಳ ಅಭಿವೃದ್ದಿ ಬಗ್ಗೆ ಚರ್ಚೆ ಆಗಿದೆ. ಇದರ ಜೊತೆ ಪ್ರಮುಖವಾಗಿ ಗೊರಗೊಂಟೆ ಪಾಳ್ಯ ಫ್ಲೈ ಓವರ್ ಸಮಸ್ಯೆ ಸರಿಪಡಿಸಲು ಚರ್ಚೆ ಆಗಿದೆ. ಹೈವೇ ಕೇಬಲ್ ಕೆಲಸ ಯಾವ ಏಜೆನ್ಸಿ ಮಾಡಬೇಕು ಅಂತ ಚರ್ಚೆ ಆಗಿದೆ. ಕೇಂದ್ರದ ಅಧಿಕಾರಿಗಳೇ ಇದನ್ನು ಮಾಡುತ್ತೇವೆ ಅಂತ ಹೇಳಿದ್ದಾರೆ. ದುರಸ್ತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಸದ್ಯ ಲಘು ವಾಹನಗಳಿಗೆ ಮಾತ್ರ ಫ್ಲೈ ಓವರ್ ಮೇಲೆ ಅವಕಾಶ ಕಲ್ಪಿಸಿದ್ದು, ಬಸ್ಸು, ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ತುಮಕೂರು ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ. ಫ್ಲೈ ಓವರ್ ದುರಸ್ತಿ ಕಾರ್ಯ ಮುಗಿದರೆ ಗೊರಗೊಂಟೆ ಪಾಳ್ಯದಿಂದ ನಾಗಸಂದ್ರದವರೆಗಿನ ಭಾರೀ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಲಿದೆ.
ಬೆಂಗಳೂರು ಸಂಬಂಧ ಎಸ್ಟಿಆರ್ಆರ್ ರೋಡ್ನಲ್ಲಿ ಕೆಲವು ವಿನಾಯ್ತಿ ಕೊಡಬೇಕಿದೆ. ಆ ವಿನಾಯ್ತಿಗಳನ್ನು ಕೊಡುವ ಬಗ್ಗೆ ನಾವು ಒಪ್ಪಿಕೊಂಡಿದ್ದೇವೆ. ಇದು ಕೂಡ ವೇಗದಲ್ಲಿ ನಡೆಯಲಿದೆ. ಇದರಲ್ಲಿ ಒಂದು ಸಣ್ಣ ಪ್ಯಾಚ್ ಇತ್ತು. ಅದನ್ನು ಕೂಡ ಕನೆಕ್ಟ್ ಮಾಡಲು ಹೇಳಿದ್ದೇವೆ. ಅದರ ಪ್ರಪೋಸಲ್ ಕಳಿಸೋಕೆ ಹೇಳಿದ್ದೇವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದೇವೆ ಅಂತಾ ಹೇಳಿದ್ದೇವೆ.
ಹೊಸ ಹೆದ್ದಾರಿ ನಿರ್ಮಾಣ ವಿಚಾರ ಸಂಬಂಧ ಶಿರಾಡಿ ಘಾಟ್ ರಸ್ತೆ ಬೇಗ ಮುಗಿಸುತ್ತೇವೆ ಅಂತ ಹೇಳಿದ್ದಾರೆ. ಹೊಸ ಹೆದ್ದಾರಿ ಬಗ್ಗೆ ಕೇಂದ್ರ ರಸ್ತೆ ನಿಧಿ ಅಡಿಯಲ್ಲಿ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ. ಆದಷ್ಟು ಬೇಗ ಈ ಕೆಲಸ ಆಗಲಿದೆ ಎಂದು ಹೇಳಿದರು.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಡ್ರೈನೇಜ್ ಸಿಸ್ಟಮ್ ಇಲ್ಲ ಅದನ್ನು ಕಂಪ್ಲೀಟ್ ಆಡಿಟ್ ಮಾಡೋಕೆ ಹೇಳಿದ್ದೇವೆ. ರೋಡ್ ಆಡಿಟ್ ಮತ್ತು ಡ್ರೈ ನೇಜ್ ಆಡಿಟ್ ಮಾಡಲಾಗುತ್ತದೆ. ಡ್ರೈನೇಜ್ ಕ್ಯಾರಿಂಗ್ ಕೆಪಾಸಿಟಿ ಹೆಚ್ಚಿಸಬೇಕಿದೆ. ಬೆಂಗಳೂರಿಗೆ ಬರುವ ಬಾಂಬೆ ಎಕ್ಸ್‌ಪ್ರೆಸ್ ಇರಬಹುದು. ಚೆನ್ನೈ ಎಕ್ಸ್‌ಪ್ರೆಸ್ ಇರಬಹುದು. ಇವುಗಳಿಗೆ ಸಿಟಿಇ ಇಂಟರ್ ಕನೆಕ್ಟಿವಿಟಿ ಹೇಗೆ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ನ್ಯಾಷನಲ್ ಹೈವೇಯಲ್ಲಿ ಕೆಲವೆಡೆ ಸ್ಕೈವಾಕ್, ಬ್ರಿಡ್ಜ್, ಅಂಡರ್ ಪಾಸ್ ಮಾಡೋದಿದೆ. ಅದರ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ. ಇವತ್ತು ಚರ್ಚೆ ಮಾಡಿರುವ ಎಲ್ಲಾ ವಿಚಾರಗಳು ತುರ್ತಾಗಿ ನಡೆಯುತ್ತವೆ. ಪ್ಲಾನಿಂಗ್ಸ್ ರೆಡಿ ಮಾಡಿಕೊಂಡು ಬನ್ನಿ, ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇದೇ ವರ್ಷ ಕೆಲಸಗಳು ಪ್ರಾರಂಭವಾಗಬೇಕು ಎನ್ನುವುದೇ ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸಗಳು ನಡೆಯಲಿವೆ. ನ್ಯಾಷನಲ್ ಹೈವೇ ಕಡೆಯಿಂದ ಹಣ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ. ಒಟ್ಟಾರೆ, ಟ್ರಾನ್ಸ್ಪೋರ್ಟ್ಗಾಗಿಯೇ ಒಂದು ಅಥಾರಿಟಿ ಮಾಡಬೇಕಿದೆ. ಅದನ್ನು ಬರುವಂತಹ ಸದನದಲ್ಲಿ ಮಂಡಿಸಿ ಅಥಾರಿಟಿ ಜಾರಿಗೆ ತರುತ್ತೇವೆ ಎಂದರು.
ಜನೋತ್ಸವಕ್ಕೆ ಸ್ಮೃತಿ ಇರಾನಿ ಆಗಮನ: ನಾಳೆಯ ಜನೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿ ನಡೆದಿದೆ. ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಛತ್ತೀಸ್ಗಢದಲ್ಲಿ ಒಂದು ಕಾರ್ಯಕ್ರಮವಿದೆ. ಇವತ್ತು ಸಂಜೆ ಅವರು ಬರುವುದರ ಬಗ್ಗೆ ನಿರ್ಧಾರ ಆಗಲಿದೆ. ಆದರೆ ನಾಳೆಯ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬರಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಸಿಎಂ ಬೊಮ್ಮಾಯಿ