ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ದೆಹಲಿ ಮಾತನಾಡಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಮುಂಭಾಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡುವ ಕುರಿತಾಗಿ ಅಧಿಕೃತ ಘೋಷಣೆಗೂ ಮೊದಲೇ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಘೋಷಣೆಯ ಬಳಿಕ ಅಭಿಮಾನಿಗಳ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದು, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಕೂಡಾ ಇದೇ ರೀತಿಯ ವಾತಾವರಣ ಸಿದ್ದರಾಮಯ್ಯರ ನಿವಾಸದ ಮುಂದೆ ಇತ್ತು. ಆದರೆ ಸಿಎಂ ಆಯ್ಕೆ ಕಸರತ್ತು ಗೊಂದಲವಾದ ಕಾರಣ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಇದೀಗ ಅಧಿಕೃತ ಘೋಷಣೆಯಾದ ಬೆನ್ನಲ್ಲೇ ಸಿದ್ದರಾಮಯ್ಯರ ಮನೆಯ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಘೋಷಣೆ ಕೂಗುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಅಲ್ಲಿ ಔಪಚಾರಿಕವಾಗಿ ಈ ವಿಚಾರವನ್ನು ಘೋಷಿಸಲಾಗುವುದು.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ರಚನೆ ಕಸರತ್ತು ಆರಂಭ; ಸಿಎಂ ಡಿಸಿಎಂ ಸೇರಿ 30 ಮಂದಿಗೆ ಸ್ಥಾನ ಸಾಧ್ಯತೆ
ನೂನತ ಸಂಪುಟ ರಚನೆ ಕಸರತ್ತು: ಸಿಎಂ, ಡಿಸಿಎಂ ಹೆಸರುಗಳು ಘೋಷಣೆಯಾಗುತ್ತಿದ್ದಂತೆ ಇದೀಗ ಕೈ ಪಕ್ಷದಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಆರಂಭಗೊಂಡಿದೆ. ಸಿದ್ದರಾಮಯ್ಯ ಬಣದಿಂದ ಮೂರು ಡಿಸಿಎಂ ಹುದ್ದೆ ಸೃಷ್ಟಿಸುವ ಒತ್ತಡ ಕೇಳಿ ಬಂದಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಡಿಕೆ ಶಿವಕುಮಾರ್ ಅವರನ್ನು ಹೊರತುಪಡಿಸಿ ಬೇರೆ ಯಾರು ಡಿಸಿಎಂ ಇರಕೂಡದು ಎಂದು ಹೇಳಿರುವ ಬಗ್ಗೆ ಮಾಹಿತಿ ಇದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲು ಪ್ರಮಾಣವಚನ ಸ್ವೀಕರಿಸಲಿದ್ದು, ಆದಾದ ಎರಡು ದಿನಗಳಲ್ಲಿ ಸಚಿವರ ಆಯ್ಕೆ ನಡೆಯಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಒಟ್ಟು 25 ರಿಂದ 30 ಶಾಸಕರಿಗೆ ಸಚಿವ ಸ್ಥಾನದ ಅವಕಾಶ ಕಲ್ಪಿಸಿ 4 ರಿಂದ 5 ಸ್ಥಾನ ಖಾಲಿ ಇಟ್ಟುಕೊಳ್ಳಲು ನಿರ್ಧಾರ ಮಾಡಲಾಗಿದೆ. ಹೈಕಮಾಂಡ್ ನಿಂದ ಸಂಪುಟ ಸೇರುವವರ ಪಟ್ಟಿ ಸಿದ್ಧವಾಗಿದೆ. ಶನಿವಾರ ಬೆಳಗ್ಗೆ 12:30 ಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಂಭಾವ್ಯ ಸಚಿವರ ವಿವರ: ಶರಣಪ್ರಕಾಶ್ ಪಾಟೀಲ್, ಬಿ ಕೆ ಹರಿಪ್ರಸಾದ್, ಅಜಯ್ ಸಿಂಗ್, ಈಶ್ವರ್ ಖಂಡ್ರೆ, ಕೆ ಜೆ ಜಾರ್ಜ್, ಆರ್ ವಿ ದೇಶಪಾಂಡೆ, ಎಂ ಬಿ ಪಾಟೀಲ್, ರಾಮಲಿಂಗ ರೆಡ್ಡಿ, ಯು ಟಿ ಖಾದರ್, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ಕೆ ಎಚ್ ಮುನಿಯಪ್ಪ, ಡಾ. ಜಿ ಪರಮೇಶ್ವರ್ ಮತ್ತಿತರರು ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.
ಚುನಾವಣೆ ಫಲಿತಾಂಶ ಹೊರಬಿದ್ದು ಐದು ದಿನಗಳಾಗಿದ್ದು, ಶನಿವಾರ ಸಂಪುಟ ರಚನೆ ಆಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಹಿನ್ನೆಲೆ ಸರ್ಕಾರ ರಚನೆ ವಿಳಂಬವಾಗಿತ್ತು.
ಇದನ್ನೂ ಓದಿ: ಸಿಎಂ ಆಯ್ಕೆ ಪ್ರಹಸನ ಮುಕ್ತಾಯ: ಡಿಕೆಶಿ, ಸಿದ್ದು ಕೈ ಮೇಲೆತ್ತಿ ಖರ್ಗೆ ಒಗ್ಗಟ್ಟು ಪ್ರದರ್ಶನ