ಬೆಂಗಳೂರು: ನೂತನ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದ ನಂತರ ಬಾರ್, ಪಬ್ಗಳಲ್ಲಿ ಮಾದಕ ವಸ್ತುಗಳು ಸರಬರಾಜು ನಡೆಯುತ್ತಿದ್ದರೇ, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಬೆನ್ನಲ್ಲೇ, ನಿನ್ನೆ ತಡರಾತ್ರಿ ಎರಡು ಬಾರ್ಗಳ ಮೇಲೆ ಸಿಸಿಬಿ ದಾಳಿ ನಡೆಸಲಾಗಿದೆ.
ನೂತನ ಕಮಿಷನರ್ ಭಾಸ್ಕರ್ ರಾವ್ ಆದೇಶದ ಮೇರೆಗೆ, ಸಿಸಿಬಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಸಿಸಿಬಿ ಡಿಸಿಪಿ ರವಿ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ, ಮಾದಕವಸ್ತು ವ್ಯಸನಿಗಳ ಹಾಗೂ ಸರಬರಾಜುದಾರರ ವಿರುದ್ಧ ಕಾರ್ಯಾಚರಣೆ ಮಾಡಿದ್ದಾರೆ.
ನಗರದ ಎಂ.ಜಿ ಟಾವೋ ಟೆರಾಸ್ ರೆಸ್ಟೋರೆಂಟ್ ಹಾಗೂ ಸ್ಕೈಬಾರ್ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದಾಗ, 600ಕ್ಕೂ ಅಧಿಕ ಗ್ರಾಹಕರು ವೀಕೆಂಡ್ ಮೋಜಿನ ಪಾರ್ಟಿಯಲ್ಲಿ ತೊಡಗಿದ್ರು. ಪರಿಶೀಲನೆಯಲ್ಲಿ ಯಾವುದೇ ಮಾದಕ ಪದಾರ್ಥಗಳು ಪತ್ತೆಯಾಗದ ಕಾರಣ ಸಿಸಿಬಿ ಅಧಿಕಾರಿಗಳು ಬರಿಗೈಯಲ್ಲೇ ವಾಪಸಾಗಿದ್ದಾರೆ.