ಬೆಂಗಳೂರು: ಶಾಸಕರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ಗೆ ಸಿಲುಕಿಸಿ ನಂತ್ರ ಬೆದರಿಕೆ ಮೂಲಕ ಹಣ ಪೀಕುತ್ತಿದ್ದ ದೊಡ್ಡ ಜಾಲವನ್ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇತ್ತೀಚೆಗೆ ಓರ್ವ ಶಾಸಕನನ್ನ ಲಾಡ್ಜ್ಗೆ ಕರೆಯಿಸಿ ಅವರೊಂದಿಗೆ ಈ ತಂಡದ ಯುವತಿ ಸಲುಗೆ ಬೆಳೆಸಿ ಅಸಭ್ಯವಾಗಿ ವರ್ತಿಸಿದ್ದಳು. ಅದರ ವಿಡಿಯೋವನ್ನು ತಂಡದ ಮತ್ತೋರ್ವ ಸೆರೆ ಹಿಡಿದಿದ್ದ. ಬಳಿಕ ಅದೇ ವಿಡಿಯೋವನ್ನ ಇಟ್ಟುಕೊಂಡು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಶಾಸಕ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಸಿಸಿಬಿ ವ್ಯಾಪ್ತಿಯ ಸೈಬರ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಬಿ ಪೊಲೀಸರು ಶಾಸಕರ ದೂರಿನನ್ವಯ ಹನಿಟ್ರ್ಯಾಪ್ ಮಾಡಿದ ನಾಲ್ವರನ್ನ ಬಂಧಿಸಿದ್ದಾರೆ.
ಈ ಬಂಧಿತ ಆರೋಪಿಗಳ ಪೈಕಿ ರಾಘವೇಂದ್ರ ಎಂಬಾತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಶಾಸಕರನ್ನ ಟಾರ್ಗೆಟ್ ಮಾಡಿ ನಂತ್ರ ತನ್ನ ಪ್ರೇಯಸಿಯನ್ನ ಮುಂದೆ ಬಿಟ್ಟಿದ್ದ ಎನ್ನಲಾಗ್ತಿದೆ. ಶಾಸಕ ಯುವತಿವೊಂದಿಗೆ ಅಸಭ್ಯವಾಗಿ ವರ್ತಿಸೋದನ್ನು ವಿಡಿಯೋ ಮಾಡಿ ಅದನ್ನಿಟ್ಟುಕೊಂಡು ಆರೋಪಿಗಳು ಬೆದರಿಸುತ್ತಿದ್ದರು. ಸದ್ಯ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದಾಗ ಆರೋಪಿಗಳು ಇನ್ನೂ ಕೆಲ ಶಾಸಕರನ್ನ ಹನಿಟ್ರ್ಯಾಪ್ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಈ ಜಾಲ ಬಹಳ ಮಂದಿಗೆ ಹಣದ ಬೇಡಿಕೆ ಇಟ್ಟಿರುವ ಮಾಹಿತಿ ಮೇರೆಗೆ ಸಿಸಿಬಿ ತನಿಖೆ ಮುಂದುವರೆದಿದೆ.
ಹನಿಟ್ರ್ಯಾಪ್ ಹೇಗೆ?: ಈ ಹನಿಟ್ರ್ಯಾಪ್ ಅನ್ನೋದು ಅಕ್ರಮವಾಗಿ ಹಣ ಮಾಡುವ ದೊಡ್ಡ ದಂಧೆಯಾಗಿದೆ. ಪ್ರತಿಷ್ಠಿತ ಉದ್ಯಮಿಗಳು, ಸಿನಿಮಾ ತಾರೆಯರು, ರಾಜಾಕಾರಣಿಗಳನ್ನ ಟಾರ್ಗೆಟ್ ಮಾಡೋದೇ ಇವರ ಖಯಾಲಿ ಆಗಿರುತ್ತೆ. ಮೊದಲು ಹುಡುಗಿಯರನ್ನು ಮುಂದೆ ಬಿಟ್ಟು ಬಹಳ ಆತ್ಮೀಯತೆ ಬೆಳೆಸಿಕೊಂಡು ನಂತ್ರ ಬೆಡ್ ರೂಮ್, ಲಾಡ್ಜ್ ಗೆ ಹೋಗ್ತಾರೆ. ಅಲ್ಲಿ ಸಲುಗೆಯಿಂದ ಇಬ್ಬರು ಇರುವಾಗ ಅದನ್ನ ಗೊತ್ತಾಗದ ಹಾಗೆ ತಂಡದ ಇತರರು ವಿಡಿಯೋ ಮಾಡ್ತಾರೆ. ಅಲ್ಲದೆ, ಆ ವಿಡಿಯೋವನ್ನು ವೈರಲ್ ಮಾಡ್ತಿವಿ ಅಂತಾ ಕೋಟಿ ಕೋಟಿ ಹಣ ಪೀಕ್ತಾರೆ. ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರು ಇಂತಹದೊಂದು ತಂಡದ ದುಷ್ಕೃತ್ಯವನ್ನು ಭೇದಿಸಿದ್ದು, ತನಿಖೆ ಮುಂದುವರಿಸಿದ್ದಾರೆ.