ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಜಿಹಾದ್ ಯುದ್ದಕ್ಕೆ ಪ್ರಚೋದಿಸುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಶಂಕಿತ ಉಗ್ರ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಶಂಕಿತನನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗುತ್ತಿದೆ.
ಅಸ್ಸೋಂ ಮೂಲದ ಅಕ್ತರ್ ಹುಸೇನ್ 2020ರಲ್ಲಿ ತಿಲಕ್ ನಗರದಲ್ಲಿ ವಾಸವಾಗಿದ್ದ. ಇತ್ತೀಚೆಗಷ್ಟೇ ಡಿಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡಿದ್ದ. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದ. ಸುದೀರ್ಘ ಕಾಲ ಒಂದೇ ಕಡೆ ಕೆಲಸ ಮಾಡದೇ ಕಂಪನಿಗಳನ್ನು ಬದಲಾಯಿಸುತ್ತಿದ್ದ.
ಈತನ ಜೊತೆ ಮತ್ತೋರ್ವ ಶಂಕಿತ ಉಗ್ರ ತಮಿಳುನಾಡಿನಲ್ಲಿದ್ದ ಜುಬಾ ಎಂಬಾತನ ಜೊತೆ ಸಂಪರ್ಕ ಹೊಂದಿದ್ದ. ಇಬ್ಬರು ಅಸ್ಸೋಂ ಮೂಲದವರಾಗಿದ್ದಾರೆ. ಆಲ್ ಕೈದಾ ಹಾಗೂ ಐಸಿಸ್ ಉಗ್ರ ಸಂಘಟನೆಗಳ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ವಿಚಾರಣೆ ವೇಳೆ ಅಕ್ತರ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಮತ್ತೊಂದು ವಿಶೇಷ ತಂಡ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಸೇಲಂನಲ್ಲಿ ಶಂಕಿತನನ್ನ ವಶಕ್ಕೆ ಪಡೆದು ನಗರಕ್ಕೆ ಕರೆತರುತ್ತಿದೆ.
ಸೋಷಿಯಲ್ ಮೀಡಿಯಾಗಳಾದ ಫೇಸ್ಬುಕ್, ವಾಟ್ಸ್ಆ್ಯಪ್, ಟೆಲಿಗ್ರಾಮ್ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಮುಖಾಂತರ ಗ್ರೂಪ್ ರಚಿಸಿದ್ದ. ಭಾರತದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಅಸ್ವಿತ್ತ ಕಾಪಾಡಿಕೊಳ್ಳಬೇಕಾದರೆ ಧರ್ಮ ಯುದ್ದ ಮಾಡಬೇಕಿದೆ ಎಂದು ಗ್ರೂಪ್ ಸದಸ್ಯರೊಂದಿಗೆ ಚಾಟ್ ಮಾಡುತ್ತಿದ್ದ. ಪರೋಕ್ಷವಾಗಿ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಲು ಪ್ರೇರೆಪಿಸುತ್ತಿದ್ದ. ಕೊಲ್ಕತ್ತಾ, ಚೆನ್ನೈ ಸೇರಿ ದೇಶದ ಹಲವು ಕಡೆಗಳಲ್ಲಿ ಯುವಕರು ಗ್ರೂಪ್ ನ ಸದಸ್ಯರಾಗಿದ್ದರು.
ಬಂಧಿತನಾದ ಶಂಕಿತ ಉಗ್ರನಿಂದ ಜಪ್ತಿ ಮಾಡಿಕೊಂಡ ಮೊಬೈಲ್ನ್ನು ಎಫ್ಎಸ್ಎಲ್ ಗೆ ಒಳಪಡಿಸಿ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ಗ್ರೂಪ್ ಸದಸ್ಯರೊಂದಿಗೆ ಜಿಹಾದ್ ಹೋರಾಟ ಬಗ್ಗೆ ಚಾಟ್ ಮಾಡಿರುವುದು ಗೊತ್ತಾಗಿದೆ. ಹಲವು ಮಂದಿ ಮೂಲಭೂತವಾದಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ.
ಕಾರ್ಯಾಚರಣೆ ಹೇಗೆ ? : ಹಲವು ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗ್ರೂಪ್ ರಚಿಸಿಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿಯ ಭಯೋತ್ಪಾದನ ನಿಗ್ರಹ ದಳ (ಎಟಿಸಿ) ಗೆ ಅಧಿಕಾರಿಗಳಿಗೆ ತೆಲಂಗಾಣ ಪೊಲೀಸರು ಬೆಂಗಳೂರಿನಲ್ಲಿ ಶಂಕಿತ ಉಗ್ರ ನೆಲೆಸಿರುವ ಬಗ್ಗೆ ಮಾಹಿತಿ ನೀಡಿದ್ದರು.
ಇದೇ ಆಧಾರದಲ್ಲಿ ನಿನ್ನೆ ಸಿಸಿಬಿ ದಾಳಿ ನಡೆಸಿ ಶಂಕಿತ ಉಗ್ರನನ್ನ ಬಂಧಿಸಿತ್ತು. ಸದ್ಯ 50ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಎನ್ಐಎ, ಐಬಿ ಹಾಗೂ ಐಎಸ್ಡಿ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಓದಿ: ಎಚ್ಚರಿಕೆ... ಸರ್ಕಾರಿ ಸಿಬ್ಬಂದಿ ಇನ್ಮುಂದೆ ಸರಿಯಾದ ಸಮಯಕ್ಕೆ ಹಾಜರಿರಬೇಕು...!