ಬೆಂಗಳೂರು: ಸ್ವಾಬ್ ಸ್ಯಾಂಪಲ್ ಸಂಗ್ರಹಿಸದೆ ಅಕ್ರಮವಾಗಿ ಕೋವಿಡ್ ಪರೀಕ್ಷಾ ವರದಿ ನೀಡುತ್ತಿದ್ದ ಖಾಸಗಿ ಲ್ಯಾಬ್ ಮಾಲೀಕ ಸೇರಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದೇವರಜೀವನಹಳ್ಳಿಯ ಕಾವಲಭೈರಸಂದ್ರ ನಿವಾಸಿಗಳಾದ ರೆಹಾನ್(31) ಮತ್ತು ಸುಭೇರ್(35) ಬಂಧಿತರು. ಆರೋಪಿಗಳಿಂದ 50ಕ್ಕೂ ಅಧಿಕ ನಕಲಿ ಕೋವಿಡ್ ವರದಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸುಭೇರ್ ಕಾವಲಭೈರಸಂದ್ರದಲ್ಲಿ ಸ್ಕೈಲೈನ್ ಡಯಾಗ್ನಸ್ಟಿಕ್ ನಡೆಸುತ್ತಿದ್ದ. ಮತ್ತೊಬ್ಬ ಆರೋಪಿ ರೆಹಾನ್ ಅದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧ ಮತ್ತು ಮುಂಜಾಗ್ರತೆ ವಹಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರ ರಾಜ್ಯಕ್ಕೆ ಹೋಗಲು, ಹೊರ ರಾಜ್ಯದಿಂದ ಬರಲು ಹಾಗೂ ಇತರ ಉದ್ದೇಶಗಳಿಗಾಗಿ ಕೋವಿಡ್ ಪರೀಕ್ಷಾ ವರದಿ ಅವಶ್ಯಕವಿದೆ. ಅದನ್ನೇ ಆರೋಪಿಗಳು ದುರ್ಬಳಕೆ ಮಾಡಿಕೊಂಡು, ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ, ತಮ್ಮ ಲ್ಯಾಬ್ ಹೆಸರಿನಲ್ಲಿ ಕೋವಿಡ್ ಪರೀಕ್ಷಾ ವರದಿ ಬೇಕಿರುವವರಿಗೆ ಪರಿಚಿತರಿಂದ ಸಂಪರ್ಕಿಸುತ್ತಿದ್ದರು. ಕೋವಿಡ್ ಪರೀಕ್ಷಾ ವರದಿ ನೀಡುವುದಾಗಿ ಹೇಳಿ ತಮ್ಮ ಬಳಿ ಬರುವವರಿಂದ ಗೂಗಲ್ ಪೇ ಅಥವಾ ನಗದು ರೂಪದಲ್ಲಿ ಹಣ ಪಡೆದುಕೊಂಡು ಯಾವುದೇ ಸ್ವಾಬ್ ಸಂಗ್ರಹಿಸಿದೆ ನೇರವಾಗಿ ಕೋವಿಡ್ ಪರೀಕ್ಷಾ ವರದಿಗಳನ್ನು ನೀಡುತ್ತಿದ್ದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಪ್ರತಿ ವರದಿಗೆ 2 ರಿಂದ 8 ಸಾವಿರ ರೂ.
ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಆರೋಪಿಗಳು ಹಣ ಪಡೆದು ನಕಲಿ ವರದಿ ನೀಡುತ್ತಿದ್ದರು. ನಗರದ ನಿವಾಸಿಗಳಿಗೆ ಒಂದು ದರ, ನೆರೆ ರಾಜ್ಯದಿಂದ ಬರುವವರಿಗೆ, ಹೋಗುವವರಿಗೆ ಮತ್ತೊಂದು ದರ ನಿಗದಿ ಮಾಡಿ ಹಣ ಪಡೆದು ಪ್ರಮಾಣ ಪತ್ರ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಪೊಲೀಸರನ್ನ ಬೆಂಬಿಡದ ಕೋವಿಡ್: ಒಂದೇ ಠಾಣೆಯಲ್ಲಿ 11 ಸಿಬ್ಬಂದಿಗೆ ಸೋಂಕು!
ಇದನ್ನೂ ಓದಿ: ಬೆಂಗಳೂರೊಂದರಲ್ಲೇ 7113 ಜನಕ್ಕೆ ವಕ್ಕರಿಸಿತು ಕೊರೊನಾ.. ರಾಜ್ಯದ ಇತರೆಡೆ 1793 ಮಂದಿಗೆ ಕೋವಿಡ್ ದೃಢ!