ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ, ಅಂತಾರಾಷ್ಟ್ರೀಯ ಆಟಗಾರ ಅಭಿಮನ್ಯು ಮಿಥುನ್ಗೆ 2ನೇ ಬಾರಿ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದಕ್ಕೆ ಅಭಿಮನ್ಯು ಕ್ಯಾರೇ ಅಂದಿರಲಿಲ್ಲ. ಈ ಕಾರಣ ಸಿಸಿಬಿ ಅಧಿಕಾರಿಗಳು ಮತ್ತೊಂದು ನೋಟಿಸ್ ಜಾರಿಮಾಡಿದ್ದಾರೆ.
ಮೊದಲ ಬಾರಿಗೆ ನೋಟಿಸ್ ಜಾರಿ ಮಾಡಿದಾಗ ಸಯ್ಯದ್ ಮುಸ್ತಾಕ್ ಅಲಿ ಟಿ-20 ಟೂರ್ನಿ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಮೂರು ದಿವಸದೊಳಗೆ ಹಾಜರಾಗುವುದಾಗಿ ಅಭಿಮನ್ಯು ಮಿಥುನ್ ತಿಳಿಸಿದ್ದರು. ಆದರೆ, 2 ವಾರ ಕಳೆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ, ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಗುಮಾನಿ ದಟ್ಟವಾಗಿದೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಹಾಗೂ ಬುಕ್ಕಿಗಳು ಹೇಳಿದ ಹಾಗೆ ಫಿಕ್ಸಿಂಗ್ನಲ್ಲಿ ಅಭಿಮನ್ಯು ಭಾಗಿಯಾಗಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ವಿಚಾರಣೆಗೆ ಗೈರಾದರೆ ಅಭಿಮನ್ಯು ಮಿಥುನ್ ಬಂಧನ ಸಾಧ್ಯತೆ ಇದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.