ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯಕ್ಗೆ ಸಿಸಿಬಿ ಮೊಬೈಲ್ ಮೂಲಕ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಕೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಅರ್ಚನಾ, 'ರವಿಶಂಕರ್ ಹಾಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ, ನನ್ನನ್ನು ಸಾಕ್ಷಿಯಾಗಿ ಪರಿಗಣಿಸಬೇಡಿ' ಎಂದು ಮನವಿ ಮಾಡಿದ್ದಾರೆ.
ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ವಿಚಾರಣೆಗೆ ಬಂದ ಅರ್ಚನಾ ತಡರಾತ್ರಿಯವರೆಗೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಆರೋಪಿ ರವಿಶಂಕರ್ ಮಾಜಿ ಪತ್ನಿ ಹೇಳಿಕೆಗಾಗಿ ಕಾದಿರುವ ಸಿಸಿಬಿ
ಈ ವಿಚಾರಣೆ ವೇಳೆ ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ರವಿಶಂಕರ್ ಜೊತೆ ತಾನು ಜೀವನ ನಡೆಸುತ್ತಿಲ್ಲ. ಆತನಿಂದಾಗಿ ನನ್ನ ಜೀವನ ಹಾಳಾಗಿದ್ದು, ಇದೀಗ ವಿಚ್ಛೇದನ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಸದ್ಯ ಬೆಂಗಳೂರು ಬಿಟ್ಟು ನಾನು ನನ್ನ ಮಗು ಪುಣೆಯಲ್ಲಿ ವಾಸ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ನನ್ನದೇನು ಪಾತ್ರವಿಲ್ಲ, ನನ್ನನ್ನು ಸಾಕ್ಷಿಯಾಗಿ ಪರಿಗಣಿಸಬೇಡಿ, ನೆಮ್ಮದಿ ಜೀವನ ಮಾಡೋದು ನನಗೆ ಮುಖ್ಯ ಎಂದು ಅಧಿಕಾರಿಗಳ ಎದುರು ಮನವಿ ಮಾಡಿರುವ ವಿಚಾರ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ರಾಗಿಣಿ ಆಪ್ತ ರವಿಶಂಕರ್ ಮಾಜಿ ಪತ್ನಿಗೆ ಸಿಸಿಬಿ ನೋಟಿಸ್
ಅರ್ಚನಾ ನಾಯ್ಕ್ ಅವರು ರವಿಶಂಕರ್ ಮಾಜಿ ಪತ್ನಿಯಾಗಿದ್ದು, 2010ರಲ್ಲಿ ವಿವಾಹವಾಗಿದ್ದರು. 2018ರಲ್ಲಿ ರಾಗಿಣಿ ಪರಿಚಯವಾದ ಈಕೆಗೆ ರವಿಶಂಕರ್ ವಿಚ್ಛೇದನ ನೀಡಿದ್ದ. ಹೀಗೆ ವಿಚ್ಛೇದನ ನೀಡುವ ಮೊದಲು ರವಿಶಂಕರ್ ಬಳಿ ರಾಗಿಣಿ ಸಹವಾಸ ಬಿಡುವಂತೆ ಆಕೆ ಮನವಿ ಮಾಡಿದ್ದರಂತೆ. ರಾಗಿಣಿಗೆ ಕೂಡ ಪಾರ್ಟಿಗಳಿಗೆ ತನ್ನ ಪತಿಯನ್ನು ಕರೆದೊಯ್ಯದಂತೆ ಸೂಚಿಸಿದ್ದರಂತೆ. ಇಬ್ಬರೂ ಇವರ ಮಾತು ಕೇಳದ ಕಾರಣ ವಿಚ್ಛೇದನ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.