ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಹುಸೇನ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಾಥಮಿಕ ತನಿಖೆ ಎದುರಿಸಿ ಹೋಗಿದ್ದ ಇಬ್ಬರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಬುಲಾವ್ ನೀಡಲು ನಿರ್ಧರಿಸಿದೆ.
ಸದ್ಯ ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ಹೇಳಿಕೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಹೇಳಿಕೆ, ಗಲಭೆ ನಡೆಯುವ ಮುಂಚಿನ ದಿನ ಏನಾಗಿತ್ತು, ಸಂಪತ್ ರಾಜ್, ಜಾಕೀರ್ ಹುಸೇನ್ ಚಲನವಲನ ಏನಾಗಿತ್ತು? ಹಾಗೆ ಮಾಜಿ ಮೇಯರ್ ಪಿಎ ಅರುಣ್ ಹೇಳಿಕೆ ಹಾಗೆ ಇಂದು ಸಿಸಿಬಿ ತನಿಖಾಧಿಕಾರಿಗಳ ಕೈಗೆ ಟೆಕ್ನಿಕಲ್ ವರದಿಯನ್ನ ಎಫ್ಎಸ್ಎಲ್ ನೀಡಲಿದ್ದು, ಇದರ ಆಧಾರದ ಮೇಲೆ ಸಾಕ್ಷಿಗಳನ್ನ ಇಟ್ಟುಕೊಂಡು ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಈ ಪ್ರಕರಣ ಇಬ್ಬರು ಪಾಲಿಕೆ ಸದಸ್ಯರ ಪಾಲಿಗೆ ಕರಾಳವಾಗುತ್ತಾ? ಸಿಸಿಬಿ ಕೈ ಸೇರಲಿರೋ ಎಫ್ಎಸ್ಎಲ್ ವರದಿ ಸಂಪತ್ ರಾಜ್, ಜಾಕೀರ್ ಹಣೆಬರಹ ನಿರ್ಧರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ. ಗಲಭೆ ದಿನದಿಂದ ಹಲವರೊಂದಿಗೆ ಇಂಟರ್ನೆಟ್ ಕಾಲ್, ವಾಟ್ಸಾಪ್ ಮಾಡಿದ್ದ ಶಂಕೆ ಹಿನ್ನೆಲೆ, ಡೇಟಾ ರಿಟ್ರೀವ್ಗಾಗಿ ಮೊಬೈಲ್ಗಳನ್ನು ಎಫ್ ಎಸ್ ಎಲ್ ಕೇಂದ್ರಕ್ಕೆ ರವಾನಿಸಿದ್ದಾರೆ. ಸದ್ಯ ಮೊಬೈಲ್ ರಿಟ್ರೀವ್ ವರದಿ ತಡವಾಗುವ ಕಾರಣ ಇರುವ ಸಾಕ್ಷಧಾರದ ಮೇಲೆ ಸಂಪತ್ ರಾಜ್ ಮತ್ತು ಜಾಕೀರ್ ಅವರನ್ನು ತನಿಖೆಗೆ ಕರೆಯಲು ಸಿಸಿಬಿ ನಿರ್ಧರಿಸಿದೆ.
ಘಟನೆ ಸಂಬಂಧ ಇತ್ತೀಚೆಗಷ್ಟೇ ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು, ಪ್ರಕರಣ ಹೆಚ್ಚಾಗಿ ರಾಜಕೀಯ ಮಜಲು ಪಡೆಯುತ್ತಿರುವ ಕಾರಣ ಮತ್ತಷ್ಟು ವಿಚಾರಣೆ ನಡೆಸಲು ನಿರ್ಧಾರ ಮಾಡಿದ್ದಾರೆ. ಇಂದು ಅಥವಾ ಈ ವಾರ ಕೈ ನಾಯಕರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.