ಬೆಂಗಳೂರು: ಪೌರತ್ವ ಕಾಯ್ದೆಯಲ್ಲಿನ ಯಾವ ನ್ಯೂನತೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಮೊದಲು ಸ್ಪಷ್ಟಪಡಿಸಲಿ ಎಂದು ಸಚಿವ ಸಿ.ಸಿ.ಪಾಟೀಲ್ ಸವಾಲು ಹಾಕಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕಾಯ್ದೆ ಸಂಬಂಧ ವದಂತಿಗಳನ್ನು ಹಬ್ಬಿಸಬಾರದು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂಬುದು ನನ್ನ ಮನವಿ. ಪ್ರತಿಪಕ್ಷ ನಾಯಕರನ್ನು ಮಂಗಳೂರಿಗೆ ಹೋಗದಂತೆ ತಡೆದಿದ್ದು ಏಕೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಾನು ಈಗ ಉತ್ತರಿಸಲು ಹೋಗುವುದಿಲ್ಲ. ಅವರು ಒಂದು ವೇಳೆ ಹಕ್ಕುಚ್ಯುತಿ ಮಂಡಿಸುತ್ತಾರೆ ಅಂದರೆ ಮಂಡಿಸುವ ಹಕ್ಕು ಅವರಿಗಿದೆ. ಅದನ್ನು ಅವರು ಸೂಕ್ತ ಸಮಯದಲ್ಲಿ ಬಳಸಲಿ ಎಂದು ತಿಳಿಸಿದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಖಂಡಿತ ಅನ್ಯಾಯವಾಗುವುದಿಲ್ಲ. ಇಷ್ಟರಲ್ಲೇ ಕರ್ನಾಟಕಕ್ಕೆ ಮಹಾದಾಯಿ ವಿಷಯದಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಸಹ ಹೇಳಿದ್ದಾರೆ. ಯಡಿಯೂರಪ್ಪನವರೂ ಸಹ ಮಹಾದಾಯಿ ಯೋಜನೆಗೆ ಬಜೆಟ್ನಲ್ಲಿ ಸಾಕಷ್ಟು ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.