ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಕಮಿಷನರ್ ಆಗಲು ಲಾಬಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಪೊಲೀಸರು ಇಂದು ಬೆಂಗಳೂರಲ್ಲಿ ಐಪಿಎಸ್ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ನಗರದ ಮಾಜಿ ಪೊಲೀಸ್ ಅಯುಕ್ತ ಫೋನ್ ಟ್ಯಾಪಿಂಗ್ ಮಾಡಿದ್ದಾರೆಂದು ಹೆಸರು ಕೇಳಿ ಬಂದ ಹಿನ್ನೆಲೆ, ಸಿಬಿಐ ತಂಡ ವಿಚಾರಣೆಗೆ ಹಾಜರಾಗುವಂತೆ ಅಲೋಕ್ಕುಮಾರ್ ಅವರಿಗೆ ನೋಟಿಸ್ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ನೀಡುವಂತೆ ಸೂಚಿಸಿತ್ತು ಎನ್ನಲಾಗ್ತಿದೆ.
ಫೋನ್ ಟ್ಯಾಪಿಂಗ್ಗೆ ಸಂಬಂಧಿಸಿದಂತೆ ಸಿಬಿಐ ತಂಡಕ್ಕೆ ಪ್ರಕರಣಕ್ಕೆ ಬೇಕಾಗಿರುವ ಪೆನ್ ಡ್ರೈವ್ ಸಿಗದ ಹಿನ್ನೆಲೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ಸುಮಾರಿಗೆ 20 ಜನ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.
ಫೋನ್ ಟ್ಯಾಪಿಂಗ್ ಆಗಿರುವ ಕುರಿತು ದಾಖಲೆಗಳಿಗಾಗಿ ಎಂ.ಜಿ. ರಸ್ತೆ ಬಳಿಯಿರುವ ಅಲೋಕ್ ಕುಮಾರ್ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಗರದ ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅಣತಿಯಂತೆ ಫೋನ್ ಟ್ಯಾಪಿಂಗ್ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಗಂಭೀರವಾಗಿರುವ ಈ ಪ್ರಕರಣವನ್ನು ಪ್ರಸ್ತುತ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಇನ್ಸ್ಪೆಕ್ಟರ್ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಇಬ್ಬರೂ ಇನ್ಸ್ಪಕ್ಟರ್ಗಳು ಮಾಜಿ ಕಮಿಷನರ್ ಅಣತಿಯಂತೆ ಫೋನ್ ಟ್ಯಾಪ್ ಮಾಡಿ ಪೆನ್ ಡ್ರೈವ್ ಮೂಲಕ, ದೂರವಾಣಿ ಮಾಹಿತಿಯನ್ನು ಮಾಜಿ ಕಮಿಷನರ್ಗೆ ನೀಡಿರುವ ವಿಚಾರವನ್ನು ಸಿಬಿಐ ಎದುರು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.