ಬೆಂಗಳೂರು: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ಮುನ್ನವೇ ಸಿಸಿಬಿ ತನಿಖೆ ನಡಿಸಿದೆ. ಹೀಗಾಗಿ ಪ್ರಕರಣದ ತನಿಖಾಧಿಕಾರಿ ಸಿಸಿಬಿ ಡಿಸಿಪಿ ಕೆ ಪಿ ರವಿಕುಮಾರ್ ಅವರನ್ನ ಸಿಬಿಐ ವಿಚಾರಣೆಗೆ ಮಾಡಿದೆ.
ಕೆ ಪಿ ರವಿಕುಮಾರ್ ಬೆಂಗಳೂರು ನಗರದ ಸಿಸಿಬಿ ಘಟಕದ 2ನೇ ಡಿಸಿಪಿಯಾಗಿದ್ದು, ಫೋನ್ ಟ್ಯಾಪಿಂಗ್ ಪ್ರಕರಣ ಬೆಳಕಿಗೆ ಬಂದಾಗ ತನಿಖೆ ನಡೆಸಿ, ಕಮಿಷನರ್ ಭಾಸ್ಕರ್ ರಾವ್ ಮತ್ತು ಬ್ರೋಕರ್ ಪರಾಜ್ ನಡುವಿನ ಪೋನ್ ಸಂಭಾಷಣೆ ಬಗ್ಗೆ ಮಾಹಿತಿ ಕಲೆಹಾಕಿ, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ಈ ಎಲ್ಲಾ ಮಾಹಿತಿ ರವಾನೆ ಮಾಡಿದ್ದರಂತೆ.
ಹೀಗಾಗಿ ಸಿಬಿಐ ಅಧಿಕಾರಿಗಳು ರವಿಕುಮಾರ್ ಅವರನ್ನ ಕೆ.ಕೆ ಗೆಸ್ಟ್ ಹೌಸ್ಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಡಿಜಿಪಿ ಅಲೋಕ್ ಕುಮಾರ್ ಅವರ ವಿಚಾರಣೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಅಲೋಕ್ ಕುಮಾರ್ ತನಗಿಂತ ಹಿರಿಯ ಅಧಿಕಾರಿ, ಅವರನ್ನ ನಾನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ. ಹೀಗಾಗಿ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮಾಹಿತಿ ನೀಡಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.