ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಈ ತಿದ್ದುಪಡಿ ಮೂಲಕ ಆದಾಯ ಮಿತಿಯನ್ನೂ ತೆಗೆದು ಹಾಕಲಾಗುತ್ತಿದ್ದು, ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀದಿಸಲು ಅನುವು ಮಾಡಿಕೊಡಲಾಗುತ್ತಿದೆ. ಸುಗ್ರೀವಾಜ್ಞೆ ಮೂಲಕ 79ಎ ಮತ್ತು 79ಬಿ ಯನ್ನು ರದ್ದುಗೊಳಿಸಲಾಗುತ್ತಿದೆ.
79ಎ ಕೃಷಿ ಭೂಮಿ ಖರೀದಿಸುವವನಿಗೆ ಆದಾಯ ಮಿತಿಯನ್ನು ವಿಧಿಸುತ್ತದೆ. ಇನ್ನು 79 ಬಿ ಕೃಷಿಕನಲ್ಲದವನಿಗೆ ಕೃಷಿ ಭೂಮಿ ಮಾರಾಟವನ್ನು ನಿಷೇಧಿಸುತ್ತದೆ. ಇದೆರಡನ್ನೂ ಸರ್ಕಾರ ರದ್ದುಗೊಳಿಸಲು ನಿರ್ಧರಿಸಿದೆ. ಈ ನಿರ್ಧಾರ ರೈತರು ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಸರ್ಕಾರ, ಈ ಹಿಂದಿನ ಭೂ ಸುಧಾರಣೆ ಕಾಯ್ದೆಯಲ್ಲಿನ ನಿಯಮಾವಳಿ ಉಲ್ಲಂಘನೆಯೇ ಹೆಚ್ಚಿದ್ದು, ಅದರಿಂದ ಏನೂ ಪ್ರಯೋಜನವಾಗುತ್ತಿಲ್ಲ, ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಸಡಿಲಿಕೆ ಮಾಡಲಾಗುತ್ತಿದೆ ಎಂಬ ಸಮಜಾಯಿಶಿ ನೀಡುತ್ತಿದೆ.
ಒಟ್ಟು ನಿಯಮ ಉಲ್ಲಂಘನೆ: ಪ್ರಕರಣ ಏನು?:
ಕಂದಾಯ ಇಲಾಖೆ ಜಮೀನು ಖರೀದಿಯಲ್ಲಿನ 79ಎ ಮತ್ತು 79ಬಿ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳ ವರೆಗೆ ಸುಮಾರು 83,171 ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥವಾಗದೇ ಉಳಿದ ಪ್ರಕರಣಗಳು 12,231. ಅಂದರೆ ಸುಮಾರು 24,553 ಎಕರೆ ಜಮೀನಿನ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದೆ. ಸರ್ಕಾರ ಒಟ್ಟು 9211 ಪ್ರಕರಣಗಳಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಿದೆ. 19,260 ಎಕರೆ ವಿಸ್ತೀರ್ಣದ ಜಮೀನಿನ್ನು ಸರ್ಕಾರ ಮುಟ್ಟುಗೋಲು ಹಾಕಿದೆ ಎಂದು ಕಂದಾಯ ಇಲಾಖೆ ನೀಡಿದ ಅಂಕಿಅಂಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು ವಿಭಾಗ:
ಬೆಂ. ವಿಭಾಗದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಾಲಾಗಿವೆ. ಸುಮಾರು 48,845 ಪ್ರಕರಣಗಳು ಹೈಕೋರ್ಟ್ನಲ್ಲಿ ದಾಖಲಾಗಿದ್ದು, 88,245 ಎಕರೆ ವಿಸ್ತೀರ್ಣದ ಜಮೀನು ಖರೀದಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ ಕ್ರಯದಾರನ ಪರ ಆದೇಶವಾಗಿರುವ ಪ್ರಕರಣ 33,623. ಸರ್ಕಾರ ಮುಟ್ಟುಗೋಲು ಹಾಕಿರುವ ಪ್ರಕರಣಗಳ ಸಂಖ್ಯೆ 6090. ಒಟ್ಟು 10,263 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿದೆ. ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ 9121.
ಮೈಸೂರು ವಿಭಾಗ:
ಮೈಸೂರು ವಿಭಾಗದಲ್ಲಿ ಸುಮಾರು 25,424 ಪ್ರಕರಣಗಳು ಹೈಕೋರ್ಟ್ನಲ್ಲಿ ದಾಖಲಾಗಿದ್ದು, 59,558 ಎಕರೆ ವಿಸ್ತೀರ್ಣದ ಜಮೀನು ಖರೀದಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ ಕ್ರಯದಾರನ ಪರ ಆದೇಶವಾಗಿರುವ ಪ್ರಕರಣ 21190. ಸರ್ಕಾರ ಮುಟ್ಟುಗೋಲು ಹಾಕಿರುವ ಪ್ರಕರಣಗಳ ಸಂಖ್ಯೆ 2583. ಒಟ್ಟು 5284 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿದೆ. ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ 1651.
ಬೆಳಗಾವಿ ವಿಭಾಗ:
ಬೆಳಗಾವಿ ವಿಭಾಗದಲ್ಲಿ ಸುಮಾರು 5,204 ನಿಯಮ ಉಲ್ಲಂಘನೆ ಪ್ರಕರಣಗಳು ಹೈಕೋರ್ಟ್ನಲ್ಲಿ ದಾಖಲಾಗಿದ್ದು, 12,336 ಎಕರೆ ವಿಸ್ತೀರ್ಣದ ಜಮೀನು ಖರೀದಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ ಕ್ರಯದಾರನ ಪರ ಆದೇಶವಾಗಿರುವ ಪ್ರಕರಣ 4,046. ಸರ್ಕಾರ ಮುಟ್ಟುಗೋಲು ಹಾಕಿರುವ ಪ್ರಕರಣಗಳ ಸಂಖ್ಯೆ 343. ಒಟ್ಟು 1,259.31 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿದೆ. ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ 815.
ಕಲಬುರಗಿ ವಿಭಾಗ:
ಕಲಬುರಗಿ ವಿಭಾಗದಲ್ಲಿ ಸುಮಾರು 3,698 ನಿಯಮ ಉಲ್ಲಂಘನೆ ಪ್ರಕರಣಗಳು ಹೈಕೋರ್ಟ್ನಲ್ಲಿ ದಾಖಲಾಗಿದ್ದು, 16,049 ಎಕರೆ ವಿಸ್ತೀರ್ಣದ ಜಮೀನು ಖರೀದಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ ಕ್ರಯದಾರನ ಪರ ಆದೇಶವಾಗಿರುವ ಪ್ರಕರಣ 2857. ಸರ್ಕಾರ ಮುಟ್ಟುಗೋಲು ಹಾಕಿರುವ ಪ್ರಕರಣಗಳ ಸಂಖ್ಯೆ 205. ಒಟ್ಟು 2453.7 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿದೆ. ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ 636.