ಬೆಂಗಳೂರು: ನಟಿಯರಾದ ರಾಗಿಣಿ ಹಾಗೂ ಸಂಜನಾ ಜೊತೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ವಿರೇನ್ ಖನ್ನಾ ವಿರುದ್ಧ ವಿವಿಧ ಠಾಣೆಗಳಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿವೆ.
ಕೇಸ್ ನಂ.1: ಕಬ್ಬನ್ ಪಾರ್ಕ್ ಠಾಣೆಯಲ್ಲಿ 2018ರಲ್ಲಿ ಖನ್ನಾ ವಿರುದ್ಧ ಮೊದಲ ಎಫ್ಐಅರ್ ದಾಖಲಾಗಿತ್ತು. ಖಾಸಗಿ ಹೋಟೆಲ್ನಲ್ಲಿ ಅನುಮತಿ ಪಡೆಯದೆ ತಡರಾತ್ರಿವರೆಗೂ ಧ್ವನಿವರ್ಧಕ ಬಳಸಿ ಸಾರ್ವಜನಿಕ ಶಾಂತಿ ಭಂಗ ತಂದ ಆರೋಪದಡಿ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೇಸ್ ನಂ.2: ಮಾದಕ ವಸ್ತು ಜಾಲ ಪ್ರಕರಣದಲ್ಲಿ 2018ರಲ್ಲಿ ಬಾಣಸವಾಡಿ ಪೊಲೀಸರು ಪ್ರತೀಕ್ ಶೆಟ್ಟಿ ಅಂಡ್ ಗ್ಯಾಂಗ್ ಅರೆಸ್ಟ್ ಮಾಡಿ 1.70 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ಕೇಸ್ನಲ್ಲಿ ವಿರೇನ್ ಖನ್ನಾ ಆರೋಪಿಯಾಗಿದ್ದ. ಪ್ರತೀಕ್ ಶೆಟ್ಟಿಯಿಂದ ಡ್ರಗ್ಸ್ ಖರೀದಿಸಿ ಆಯೋಜಿಸಲಾಗಿದ್ದ ಪಾರ್ಟಿಗಳಲ್ಲಿ ಬರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೇಸ್ ನಂ.3: ಸಂಜನಾ-ರಾಗಿಣಿ ಡ್ರಗ್ಸ್ ಪ್ರಕರಣದಲ್ಲಿ ವಿರೇನ್ ಖನ್ನಾ ಕಿಂಗ್ ಪಿನ್ ಆಗಿ ಗುರುತಿಸಿಕೊಂಡಿದ್ದಾನೆ. ನಗರದಲ್ಲಿ ಹೈ-ಫೈ ಪಾರ್ಟಿಗಳನ್ನು ಆಯೋಜಿಸಿ ನಗರದ ಡ್ರಗ್ಸ್ ಫೆಡ್ಲರ್ಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನಂತೆ. ಈ ಹಿನ್ನೆಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಸಿಸಿಬಿ ತನಿಖೆ ಚುರುಕುಗೊಳಿಸಿದೆ.
ಕೇಸ್ ನಂ.4: ಪೊಲೀಸ್ ವಸ್ತ್ರ ಧರಿಸಿದ್ದಕ್ಕೂ ವಿರೇನ್ ಖನ್ನಾ ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸ್ ಸಮವಸ್ತ್ರ ಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿರೇನ್ ಖನ್ನಾ ಪೊಲೀಸ್ ಸಮವಸ್ತ್ರವನ್ನು ಹಲವು ಕಡೆ ದುರ್ಬಳಕೆ ಮಾಡಿರುವ ಆರೋಪ ಹಿನ್ನೆಲೆ ಹೊಸ ಕೇಸ್ ದಾಖಲಾಗಿದೆ. ಸದ್ಯ ನಾಲ್ಕು ಪ್ರಕರಣಗಳ ಸಂಬಂಧ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.