ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸ್ವಂತ ಮನೆ ಮಾಡಿಕೊಳ್ಳುವುದು ಹಲವು ಜನರ ಕನಸು. ಆದರೆ, ಹೀಗೆ ಕನಸು ಕಟ್ಟಿಕೊಂಡ ಜನರ ಹತ್ತಿರ ಕೋಟ್ಯಂತರ ರೂಪಾಯಿ ಹಣ ಪಡೆದು ಸಂಸ್ಥೆಯೊಂದು ಮೋಸ ಮಾಡಿದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ಒಂದು ಸ್ವಂತ ಮನೆ ಮಾಡಿಕೊಳ್ಳುವುದು ಹಲವರ ಕನಸು. ಇದಕ್ಕಾಗಿಯೇ ಜೀವನದ ಬಹುತೇಕ ದುಡಿಮೆಯನ್ನ ಮೀಸಲಿಡುತ್ತಾರೆ. ಹೀಗೆ ಹಲವರು ನಗರದ ಪ್ರತಿಷ್ಠಿತ ಬಿಲ್ಡರ್ ಓಜೋನ್ ಗ್ರೂಪ್ ನಿರ್ಮಾಣ ಮಾಡುತ್ತಿದ್ದ ಟೌನ್ ಶಿಪ್ ನಲ್ಲಿ ಮನೆಗಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ, ಇಷ್ಟು ದಿನ ಆದ್ರೂ ಮನೆ ನೀಡಿಲ್ಲ ಅಂತ ಆರೋಪಿಸಿ ಈಗ ಹಲವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆಲ ವರ್ಷಗಳ ಹಿಂದೆ ಓಜೋನ್ ಸಂಸ್ಥೆ ದೇವನಹಳ್ಳಿ ಬಳಿ ಓಜೋನ್ ಅರ್ಬೇನಿಯಾ ಎಂಬ ಟೌನ್ ಶಿಪ್ ನಿರ್ಮಾಣ ಶುರು ಮಾಡಿತ್ತು. ಇದರಲ್ಲಿ ಮನೆ ನೀಡುವುದಾಗಿ ಸಾಕಷ್ಟು ಜನರರಿಂದ ಹಣ ಹೂಡಿಕೆ ಮಾಡಿಸಿಕೊಂಡಿತ್ತು. ಎರಡು ವರ್ಷದಲ್ಲಿ ಪ್ರಾಜೆಕ್ಟ್ ಪೂರ್ಣ ಮಾಡುವುದಾಗಿ ಹೇಳಿದ್ದ ಸಂಸ್ಥೆ ಇನ್ನೂ ಪ್ರಾಜೆಕ್ಟ್ ಕಂಪ್ಲೀಟ್ ಮಾಡಿಲ್ಲ.
ಹೀಗಾಗಿ ಹಣ ಕಟ್ಟಿರುವವರು ಪ್ರಶ್ನೆ ಮಾಡಿದರೆ ಶೀಘ್ರದಲ್ಲಿ ಮುಗಿಸುವುದಾಗಿ ಆರು ತಿಂಗಳಿಂದ ಸಬೂಬು ಹೇಳಲಾಗುತ್ತಿದೆಯಂತೆ. ಸದ್ಯ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ 19 ಜನ ದೂರು ದಾಖಲಿಸಿದ್ದಾರೆ. ಇನ್ನೂ ಹೆಚ್ಚಿನ ಜನ ದೂರು ದಾಖಲಿಸುವ ಸಾಧ್ಯತೆಗಳಿವೆ.