ಬೆಂಗಳೂರು : ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ಶಿಥಿಲಗೊಂಡ ಸ್ಥಿತಿಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಾಲೀಕ ಸುರೇಶ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ, ಆತನ ಪತ್ತೆಗೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
1974ರಲ್ಲಿ ನಿರ್ಮಾಣಗೊಂಡಿದ್ದ ಹಳೆ ಹಾಗೂ ಮಣ್ಣಿನಿಂದ ಕೂಡಿದ ಮನೆ ಇದಾಗಿತ್ತು. ನಂಜಪ್ಪ ಎಂಬುವರು ಮನೆ ಕಟ್ಟಿದ್ದು ಎಂಬುದು ತಿಳಿದು ಬಂದಿದೆ. ಮಗ ಸುರೇಶ್ ಉಸ್ತುವಾರಿ ವಹಿಸಿಕೊಂಡಿದ್ದ.
ಮೂರು ಅಂತಸ್ತಿನ ಮನೆಯಲ್ಲಿ ಒಟ್ಟು ಎಂಟು ಮನೆಗಳಿವೆ. ಬಹುತೇಕ ಮೆಟ್ರೋ ಕಾರ್ಮಿಕರೇ ವಾಸವಾಗಿದ್ದರು. ಲಕ್ಕಸಂದ್ರ ಬಳಿ ಮೆಟ್ರೋ ಕಾಮಗಾರಿ ಹಿನ್ನೆಲೆ ಕಳೆದ ಎರಡು ವರ್ಷಗಳ ಹಿಂದೆ ಮನೆಯೊಳಗೆ ಕಟ್ಟಡದಲ್ಲಿ ಬಿರುಕು ಮೂಡಿತ್ತು. ಇಷ್ಟಾದರೂ ಮಾಲೀಕ ಸುರೇಶ್ ಎಚ್ಚೆತ್ತಿರಲಿಲ್ಲ.
ಶಿಥಿಲಗೊಂಡಿದ್ದ ಮನೆಯೊಳಗಡೆ ನಿನ್ನೆ ರಾತ್ರಿ ಕಟ್ಟಡದಲ್ಲಿ ಬಿರುಕುಗೊಂಡಿತ್ತು. ಒಂದೆರಡು ಇಟ್ಟಿಗೆಗಳು ಉರುಳಿಬಿದ್ದಿದ್ದವು. ಕೂಡಲೇ ಆತಂಕಗೊಂಡ ನಿವಾಸಿಗಳು ಪಾತ್ರೆ-ಸಾಮಾನು ಸಮೇತ ಮನೆ ತೆರವುಗೊಳಿಸಿದ್ದರು.
ಇಂದು ಬೆಳಗ್ಗೆ ಮನೆಯೊಳಗಡೆ ಮತ್ತಷ್ಟು ಬಿರುಕು ಕಾಣುವುದನ್ನ ಕಂಡು ಮನೆಯೊಳಗಿನಿಂದ ಎಲ್ಲರೂ ಹೊರ ಬಂದಿದ್ದಾರೆ. ಬೆಳಗ್ಗೆ 11.30ರ ವೇಳೆ ಕಟ್ಟಡ ನೆಲಕ್ಕೆ ಕುಸಿದಿದೆ. ಸದ್ಯ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಡುಗೋಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ