ಬೆಂಗಳೂರು: ಗೃಹ ಸಚಿವರ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಯುವ ಮೋರ್ಚಾದ 14 ಮಂದಿ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 143, 149 (ಕಾನೂನು ಬಾಹಿರವಾಗಿ ಒಗ್ಗೂಡುವಿಕೆ) ಆರೋಪದಡಿ ಸದಾಶಿವನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಯ ಕೆಲವು ಆರೋಪಿಗಳ ಕುರಿತ ಹಾಗೂ ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ನೀಡಿರುವ ಹೇಳಿಕೆಯನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ಬೆಳಗ್ಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದಾಶಿವನಗರದ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಸದಾಶಿವನಗರ ಠಾಣಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆ, "ಪರಮೇಶ್ವರ್ ಅವರು ತಮ್ಮ ಮಾತು ಹಿಂಪಡೆಯಬೇಕು. ಕಾಂಗ್ರೆಸ್ ಸರ್ಕಾರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಕಿರಾತಕರು, ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುತ್ತೇವೆ" ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು
ಬಳಿಕ ಮಾತನಾಡಿದ್ದ ಗೃಹ ಸಚಿವ ಜಿ.ಪರಮೇಶ್ವರ್, ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣದ ಮರುಪರಿಶೀಲನೆ ಕುರಿತು ಪ್ರತಿಕ್ರಿಯಿಸುತ್ತಾ, "ಪ್ರಕರಣ ಹಿಂಪಡೆದಿರುವುದಾಗಿ ಹೇಳಿದ್ದು ಯಾರು?. ಅವರು ಹೇಳಿದ್ದೆಲ್ಲ ಕೇಳಿಕೊಂಡು ಕೂರಲು ಸಾಧ್ಯವಿಲ್ಲ. ಯಾವುದೇ ಸಂಘ ಸಂಸ್ಥೆಗಳಾಗಬಹುದು. ವೈಯಕ್ತಿಕವಾಗಿ ಶಾಸಕರು, ಸಂಸದರು ಪತ್ರ ಕೊಟ್ಟಾಗ ಇದರಲ್ಲಿ ಬಹಳಷ್ಟು ಅಮಾಯಕರಿದ್ದಾರೆ, ಅವರ ಬಿಡುಗಡೆ ಆಗಬೇಕು ಎಂದು ಮನವಿ ಬಂದಾಗ ಏಕಾಏಕಿ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ. ಅದಕ್ಕೂ ಒಂದು ವಿಧಾನವಿದೆ. ಪ್ರಕರಣದ ಫೈಲ್ ತರಿಸಿ ನಂತರ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗುತ್ತದೆ. ಅಲ್ಲಿ ನಿರ್ಧಾರವಾಗುತ್ತೆ. ನಾನೇ ಹಿಂದೆ ಗೃಹ ಸಚಿವನಾಗಿದ್ದಾಗ ಈ ರೀತಿ ಮಾಡಿದ್ದೇನೆ. ಬೊಮ್ಮಾಯಿ, ಆರಗ ಜ್ಞಾನೇಂದ್ರರೂ ಗೃಹ ಸಚಿವರಾಗಿದ್ದವರು. ಅವರಿಗೆ ಪ್ರಕ್ರಿಯೆ ಗೊತ್ತಿಲ್ವಾ.?' ಅರ್ಜಿ ಬಂದ ತಕ್ಷಣ ನಾವೇನೋ ತಪ್ಪು ಮಾಡಿದ್ದೇವೆ ಎಂದು ರಾಜ್ಯದಲ್ಲಿ ಬಿಂಬಿಸುತ್ತಿದ್ದಾರೆ. ಇದು ತಪ್ಪಲ್ವಾ" ಎಂದು ಪ್ರಶ್ನಿಸಿದ್ದರು.
ಉಡುಪಿ ಪ್ರಕರಣದಿಂದ ಪ್ರತಿಭಟನೆ ಎನ್ನುವ ಕುರಿತು ಮಾತನಾಡಿದ್ದ ಅವರು, "ನಾನು ಮಕ್ಕಳಾಟ ಎಂದು ಹೇಳಿಲ್ಲ. ನಾನು, ನೀವು ಕಾಲೇಜು ಹೋಗಿದ್ದವರು. ಫ್ರೆಂಡ್ಸ್ ನಡುವೆ ಕೆಲ ಘಟನೆಗಳು ನಡೆಯುತ್ತವೆ. ಅದು ದೊಡ್ಡ ಪ್ರಮಾಣಕ್ಕೆ ಹೋಗುತ್ತಿರಲಿಲ್ಲ. ಇದೂ ಸಹ ಅಂಥದ್ದೇ ಘಟನೆ ಇರಬಹುದು ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ವಿನಃ ಮಕ್ಕಳಾಟ ಎಂದು ಹೇಳಿಲ್ಲ. ಈ ವಿಚಾರವನ್ನು ಪ್ರಿನ್ಸಿಪಾಲ್‌ಗೆ ಬಿಡಬೇಕು. ಅವರು ಈಗಾಗಲೇ ಆ ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ದೊಡ್ಡ ಪ್ರಮಾಣದ ತಪ್ಪಾಗಿದೆ ಅಂತಾದರೆ ಪೋಷಕರನ್ನ ಕರೆಸಿ ಮಾತನಾಡುತ್ತಾರೆ. ದೂರು ಕೊಡುತ್ತಾರೆ. ಅದು ಕಾಲೇಜಿಗೆ ಸಂಬಂಧಿಸಿದ ವಿಚಾರ. ಆ್ಯಂಟಿ ರಾಗಿಂಗ್ ಕಮಿಟಿಯಿದೆ. ಅಲ್ಲಿ ಹ್ಯಾಂಡಲ್ ಮಾಡಬೇಕು" ಎಂದಿದ್ದರು.
ಇದನ್ನೂ ಓದಿ: G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್ ವಾಪಸ್: ಜಿ.ಪರಮೇಶ್ವರ್